ಕರ್ನಾಟಕ

ನನ್ನನ್ನು ಮಂತ್ರಿ ಮಾಡಿ, ಇಲ್ಲವೇ ವಿಷ ಕೊಡಿ ಎಂದು ಮುಖ್ಯಮಂತ್ರಿಯನ್ನು ಇಕ್ಕಟ್ಟಿಗೆ ಸಿಲುಕಿಸಿದ ಎಂಎಲ್​ಸಿ

Pinterest LinkedIn Tumblr


ಬೆಂಗಳೂರು: ನಾವು ಸಚಿವರಾಗಿ ರಾಜೀನಾಮೆ ನೀಡಿ ನಿಮ್ಮ ಪಕ್ಷಕ್ಕೆ ಬಂದಿದ್ದೇವೆ. ಇದೀಗ ಶಾಸಕರಾಗಿದ್ದೇವೆ. ನನ್ನನ್ನು ಮಂತ್ರಿ ಮಾಡಿ, ಇಲ್ಲದಿದ್ದರೆ ವಿಷವನ್ನು ಕೊಟ್ಟುಬಿಡಿ… ‘ ಎಂದು ಸಿಎಂ ಬಿ.ಎಸ್​.ಯಡಿಯೂರಪ್ಪ ಅವರನ್ನು ಎಂಎಲ್​ಸಿ ಆರ್. ಶಂಕರ್ ಆಗ್ರಹಿಸಿದ್ದಾರೆ.

ಸಚಿವ ಸಂಪುಟ ವಿಸ್ತರಣೆ ವಿಳಂಬ ಆಗುತ್ತಿರುವುದಕ್ಕೆ ತೀವ್ರ ಅಸಮಾಧಾನಗೊಂಡಿರುವ ಆರ್​.ಶಂಕರ್​ ಮತ್ತು ಎಂಟಿಬಿ ನಾಗರಾಜ್​ ಇಬ್ಬರೂ ಇತ್ತೀಚಿಗೆ ಸಿಎಂ ಅವರನ್ನು ಭೇಟಿಯಾಗಿ ಮನದ ನೋವನ್ನು ತೋರ್ಪಡಿಸಿಕೊಂಡಿದ್ದಾರೆ. ಸಚಿವ ಸ್ಥಾನ ಇನ್ನೂ ಸಿಗದಿರುವುದಕ್ಕೆ ಸಿಎಂ ವಿರುದ್ಧ ಸಿಡಿದೆದ್ದಿರುವ ಆ ಇಬ್ಬರೂ ‘ಏನ್ ಸಾರ್‌, ನಮ್ಮನ್ನು ಸಚಿವರನ್ನಾಗಿ ಮಾಡಲೇ ಇಲ್ಲ. ಕಳೆದ ಅಧಿವೇಶನದಲ್ಲಿ ಸಚಿವರನ್ನಾಗಿ ಮಾಡುತ್ತೇವೆ ಅಂತಾ ಹೇಳಿದ್ರಿ. ಈಗ ಅಧಿವೇಶನ ನಡೆಯುತ್ತಿದೆ ಈಗಲೂ ಮಾಡಲಿಲ್ಲ ಅಂದರೆ ಹೇಗೆ? ನಮ್ಮಿಂದ ನಿಮಗೆ ಏನಾದರೂ ತೊಂದರೆ ಆದರೆ ಹೇಳಿ ನಾನು ರಾಜೀನಾಮೆ ನೀಡುತ್ತೇವೆ’ ಎಂದಿದ್ದಾರೆ.

‘ನಿಮ್ಮನ್ನು ನಂಬಿಕೊಂಡು ಬಂದಿದ್ದು ನಾವು. ನಮ್ಮಿಂದ ನಿಮಗೆ ತೊಂದರೆ ಆಗಿದ್ದರೆ ಹೇಳಿ ಈಗಲೇ ಎಂಎಲ್​ಸಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ’ ಎಂದು ಸಿಎಂಗೆ ಆರ್.ಶಂಕರ್​ ಹೇಳಿದ್ದಾರೆ.

ಎಂಟಿಬಿ ನಾಗರಾಜ್​ ಕೂಡ ರಾಜೀನಾಮೆ ಮಾತು ಪ್ರಸ್ತಾಪಿಸಿದ್ದು, ಇವರ ಮಾತಿಗೆ ಕಕ್ಕಾಬಿಕ್ಕಿಯಾದ ಸಿಎಂ, ‘ಕೈ ಮುಗಿಯುತ್ತೇನೆ ಸುಮ್ಮನಿರಿ. ರಾಜೀನಾಮೆ ನೀಡುವ ಮಾತನಾಡಬೇಡಿ. ಹೈಕಮಾಂಡ್ ಒಪ್ಪಿಗೆ ನೀಡಿದ ತಕ್ಷಣವೇ ಸಚಿವರನ್ನಾಗಿ ಮಾಡುತ್ತೇವೆ’ ಎಂದು ಮನವಿ ಮಾಡಿದರು. ‘ನೋಡಿ ಸರ್ ಯಾವಾಗಲೂ ಹೀಗೆ ಹೇಳುತ್ತೀರಿ…’ ಎನ್ನುತ್ತ ಎಂಟಿಬಿ ನಾಗರಾಜ್​ ಗರಂ ಆಗಿದ್ದರು ಎಂದು ಮೂಲಗಳು ತಿಳಿಸಿವೆ.

‘ಪ್ರತಿ ಬಾರಿ ಬಂದಾಗಲೂ ಸಚಿವರನ್ನಾಗಿ ಮಾಡುತ್ತೇವೆ ಅಂತ ಹೇಳುತ್ತೀರಾ. ನಮ್ಮ ಮುಖ ನೋಡಿದ ಕೂಡಲೇ ಇದನ್ನೇ ಹೇಳುತ್ತೀರಾ. ಆದರೆ ನಂತರ ಏನೂ ಮಾಡುವುದಿಲ್ಲ. ಸಚಿವರಾಗಿದ್ದವರು ಈಗ ಶಾಸಕರಾಗಿದ್ದೇವೆ. ನಾವೀಗ ವಿಷ ಕುಡಿಯಬೇಕಾಗುತ್ತದೆ, ನೀವೆ ವಿಷ ಕೊಡಿ. ಆ ಪರಿಸ್ಥಿತಿ ನಮಗೆ ಬಂದಿದೆ’ ಎಂದು ಆರ್.ಶಂಕರ್ ಬೇಸರಿಸಿದ್ದಾರೆ. ‘ನಿಮ್ಮನ್ನು ಸಚಿವರನ್ನಾಗಿ ಮಾಡುವ ಜವಾಬ್ದಾರಿ ನನ್ನದು’ ಎಂದು ಸಿಎಂ ಮತ್ತೊಮ್ಮೆ ಭರವಸೆ ನೀಡುವ ಮೂಲಕ ಅವರನ್ನು ಸಮಾಧಾನಿಸಲು ಯತ್ನಿಸಿದ್ದಾರೆ.

Comments are closed.