ವಾಷಿಂಗ್ಟನ್: ಜೋ ಬೈಡೆನ್ ಮತ್ತು ಕಮಲಾ ಹ್ಯಾರಿಸ್ ಅವರು ಅಮೆರಿಕದ ಅಧ್ಯಕ್ಷ ಹಾಗೂ ಉಪಾಧ್ಯಕ್ಷೆಯಾಗಿ ಪ್ರಮಾಣ ವಚನ ಸ್ವೀಕರಿಸುವ ಕಾರ್ಯಕ್ರಮದಲ್ಲಿ ಭಾರತದ ಕಂಪು ಕಾಣಿಸಿಕೊಳ್ಳುತ್ತಿದೆ.
2021ರ ಜನವರಿಯಲ್ಲಿ ನಡೆಯಲಿರುವ ಪ್ರಮಾಣ ವಚನ ಕಾರ್ಯಕ್ರಮದ ಸಂಪೂರ್ಣ ಉಸ್ತುವಾರಿಯನ್ನು ವಹಿಸಿಕೊಂಡಿರುವವರು ಭಾರತ ಮೂಲದ ಮಜು ವರ್ಗೀಸ್ ಅವರು. ಅವರ ತಾಯಿ ಭಾರತದ ಕೇರಳದಲ್ಲಿ ನರ್ಸ್ ಆಗಿ ಕೆಲಸ ಮಾಡಿದ್ದವರು. ತಂದೆ ನ್ಯೂಯಾರ್ಕ್ನಲ್ಲಿ ಕ್ಯಾಬ್ ಡ್ರೈವರ್ ಆಗಿದ್ದವರು. ಮಜು ಅವರು ವೃತ್ತಿಯಲ್ಲಿ ವಕೀಲರಾಗಿದ್ದು, ಅಧ್ಯಕ್ಷೀಯ ಚುನಾವಣೆ ಸಮಯದಲ್ಲಿ ಬೈಡೆನ್ ಮತ್ತು ಕಮಲಾ ಅವರ ಪರವಾಗಿ ಕೆಲಸ ಮಾಡಿದ್ದರು. ಸಾಕಷ್ಟು ಜನ ಸ್ವಯಂಸೇವಕರನ್ನು ಒಗ್ಗೂಟಿಸಿ, ಅವರ ಗೆಲುವಿಗೆ ಕಾರಣರಾಗಿದ್ದಾರೆ. ಇದೀಗ ಅವರನ್ನು ಗುರುತಿಸಿರುವ ಅಧ್ಯಕ್ಷರು, ಅವರಿಗೆ ಅಧ್ಯಕ್ಷೀಯ ಉದ್ಘಾಟನಾ ಸಮಿತಿಯ ಕಾರ್ಯನಿರ್ವಾಹಕ ನಿರ್ದೇಶಕರ ಸ್ಥಾನವನ್ನು ಕೊಟ್ಟಿದ್ದಾರೆ.
ಮಜು ವರ್ಗೀಸ್ ಅವರು ಈ ಹಿಂದೆ ಬರಾಕ್ ಒಬಾಮಾ ಅವರು ಅಧ್ಯಕ್ಷರಾಗಿದ್ದಾಗ ಅವರ ವಿಶೇಷ ಸಹಾಯಕ ಮತ್ತು ಮುಂಗಡ ಉಪನಿರ್ದೇಶಕರಾಗಿ ಕೆಲಸ ಮಾಡಿದ್ದರು.