ರಾಷ್ಟ್ರೀಯ

ವಿವಾಹದ ಮಾತುಕತೆ ನಡೆಸುವ ಮೊದಲು ವಧು-ವರರ ಧರ್ಮ, ಉದ್ಯೋಗ ಘೋಷಣೆ ಕಡ್ಡಾಯ

Pinterest LinkedIn Tumblr


ಗುವಾಹಟಿ: ಮದುವೆ ಕುರಿತು ಮಾತುಕತೆ ನಡೆಸುವ ಮೊದಲು ವಧು-ವರರ ಧರ್ಮ, ಉದ್ಯೋಗ, ಆದಾಯವನ್ನು ಘೋಷಿಸಿ ಮಾತುಕತೆ ಮುಂದುವರೆಸಬೇಕು ಎಂದು ಅಸ್ಸಾಂ ಸರಕಾರ ಕಾನೂನು ರೂಪಿಸಲು ಹೊರಟಿದೆ.

ವಿವಾಹದ ಕಾನೂನಿನಲ್ಲಿ ಪಾರದರ್ಶಕತೆ ತರಲು ಕರಡು ಮಸೂದೆಯನ್ನು ಸರ್ಕಾರ ಸಿದ್ದಪಡಿಸುತ್ತಿದೆ ಎಂದು ಅಸ್ಸಾಂ ಸಚಿವ ಹಿಮವಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ.

ಮದುವೆಗೆ ಮುಂಚಿತವಾಗಿ ವಿವರಗಳನ್ನು ಬಹಿರಂಗಪಡಿಸುವ ಪ್ರಾಮುಖ್ಯತೆಯ ಕುರಿತು ಮಾತನಾಡಿದ ಶರ್ಮಾ, ಇದು ಎಲ್ಲಾ ಮದುವೆಗಳಿಗೆ ಕಡ್ಡಾಯವಾಗಿರುತ್ತದೆ. ಮಹಿಳೆಗೆ ಇದರಿಂದ ಅನುಕೂಲವಿದೆ ಹೊರತು ಇದು ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ ಕಾನೂನಿನಂತಲ್ಲ ಎಂದಿದ್ದಾರೆ.

ಮಹಿಳಾ ಸಬಲೀಕರಣ ದೃಷ್ಟಿಯಿಂದ ಈ ಮಸೂದೆ ರಚಿಸಿಲಾಗುತ್ತಿದೆ. ಪತಿ-ಪತ್ನಿಯರ ನಡುವೆ ಯಾವ ಮುಚ್ಚುಮರೆ ಇರಬಾರದು ಎಲ್ಲಾ ವಿಷಯಗಳನ್ನು ಪರಸ್ಪರ ಅರಿತಿರಬೇಕು ಹಾಗಾಗಿ ವಧು-ವರರಿಬ್ಬರೂ ತಮ್ಮ ಧರ್ಮ ಮತ್ತು ಆದಾಯ ಮೂಲದಂತಹ ಮಾಹಿತಿಯನ್ನು ಬಹಿರಂಗಪಡಿಸುವುದು ಕಡ್ಡಾಯವಾಗಲಿದೆ ಎಂದು ಸಚಿವರು ಹೇಳಿದ್ದಾರೆ. ದೇಶಾದ್ಯಂತ ‘ಲವ್ ಜಿಹಾದ್’ ಕುರಿತಾದ ಚರ್ಚೆಯ ನಡುವೆ ಸಚಿವರ ಈ ಹೇಳಿಕೆ ಬಂದಿದೆ.

ಅಸ್ಸಾಂ ಸರ್ಕಾರ ಏನಾದರೂ ಯೋಜನೆ ರೂಪಿಸಿದ್ದಾದರೆ ಅದು ಯಾವುದೇ ಧರ್ಮಕ್ಕೆ ವಿರುದ್ಧವಾಗಿರುವುದಿಲ್ಲ. ಇದು ಮದುವೆಯಲ್ಲಿ ಪಾರದರ್ಶಕತೆಯನ್ನು ತರಲು ಬಯಸಿದೆ. ಅದಕ್ಕಾಗಿ ನಾವು ಶಾಸನ ರೂಪಿಸಲು ಚಿಂತನೆ ನಡೆಸಿದ್ದೇವೆ ಎಂದು ಹೇಳಿದರು.

ಪರಸ್ಪರರಲ್ಲಿ ಯಾವ ಮುಚ್ಚುಮರೆ ಇರಬಾರದು, ಧರ್ಮ, ಜೀವನಕ್ಕಾಗಿ ತಾನೇನು ಮಾಡುತ್ತೇನೆ, ನನ್ನ ಆದಾಯ ಏನು ಎನ್ನುವುದನ್ನು ಬಹಿರಂಗಪಡಿಸಬೇಕು. ಎಂದ ಸಚಿವ ಶರ್ಮಾ ‘ಲವ್ ಜಿಹಾದ್’ ವಿಷಯದ ಕುರಿತು ಮಾತನಾಡಿ, ನಮ್ಮ ಆಲೋಚನೆ ‘ಲವ್ ಜಿಹಾದ್’ ಗೆ ಕುರಿತಾದುದಲ್ಲ.ನಿಮ್ಮ ಗುರುತು, ಉದ್ಯೋಗ ಅಥವಾ ಆದಾಯವನ್ನು ನೀವು ಮರೆಮಾಡಬಾರದು ಎಂಬುದು ನನ್ನ ಆಲೋಚನೆ.

Comments are closed.