
ಶ್ರೀನಗರ: ದೇಶದ ಗಡಿಯೊಳಗೆ ನುಸುಳಲು ಭಯೋತ್ಪಾದಕರು ಉಪಯೋಗಿಸುತ್ತಿದ್ದ ಸುರಂಗ ಪತ್ತೆಗೆ ಭಾರತೀಯ ಸೇನೆಯು ಸುಮಾರು 200 ಮೀ. ಪಾಕ್ ಗಡಿಯೊಳಗೆ ಕಾರ್ಯಾಚರಣೆ ನಡೆಸಲಾಗಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.
‘ಕಳೆದ ವಾರ ಭಾರತೀಯ ರಕ್ಷಣಾ ಪಡೆಗಳಿಂದ ಹತ್ಯೆಯಾದ ಉಗ್ರರು ಬಳಸುತ್ತಿದ್ದ ಸುರಂಗದ ಮೂಲವನ್ನು ಪತ್ತೆ ಹಚ್ಚುವ ಸಲುವಾಗಿ ನಡೆಸಿದ ಕಾರ್ಯಾಚರಣೆ ವೇಳೆ ರಕ್ಷಣಾ ಪಡೆ ಪಾಕಿಸ್ತಾನ ಗಡಿಯೊಳಗೆ ಬಹುತೇಕ 200 ಮೀಟರ್ಗಳಷ್ಟು ದೂರ ಕ್ರಮಿಸಿದೆ’ ಎಂದು ಹೇಳಲಾಗಿದೆ.
ಜಮ್ಮು ಮತ್ತು ಕಾಶ್ಮೀರದ ಅಂತರರಾಷ್ಟ್ರೀಯ ಗಡಿ ರೇಖೆ ಬಳಿ ಇರುವ ಸಾಂಬಾ ವಲಯದಲ್ಲಿ ಗಡಿ ನುಸುಳಲು ಬಳಸಿದ್ದಾರೆ ಎಂದು ಶಂಕಿಸಲಾಗಿರುವ ಸುಮಾರು 150 ಮೀಟರ್ ಉದ್ದದ ಸುರಂಗ ಪತ್ತೆಯಾಗಿದೆ. ಕಳೆದ ತಿಂಗಳು ಭದ್ರತಾ ಪಡೆಗಳಿಂದ ಹತ್ಯೆಯಾದ ಉಗ್ರರ ಬಳಿ ಇದ್ದ ಮೊಬೈಲ್ಗಳಿಂದಾಗಿ ಸುರಂಗದ ಬಗ್ಗೆ ಸುಳಿವು ದೊರೆತಿತ್ತು.
ಕಾರ್ಯಾಚರಣೆ ಕುರಿತು ಮಾತನಾಡಿರುವ ಗಡಿ ಭದ್ರತಾ ಪಡೆಯ (ಬಿಎಸ್ಎಫ್) ಡಿಜಿ ರಾಕೇಶ್ ಅಸ್ತಾನಾ ಅವರು, ‘ನವೆಂಬರ್ 19ರಂದು ಹತ್ಯೆಯಾದ ಉಗ್ರರು ಬಳಸುತ್ತಿದ್ದ ಮೊಬೈಲ್ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಅವುಗಳಿಂದ ದೊರೆತ ಮಾಹಿತಿಯ ಆಧಾರದಲ್ಲಿ ಉಗ್ರರು ಸಾಂಬಾ ವಲಯದಲ್ಲಿ ಒಳನುಸುಳಲು ಬಳಸುತ್ತಿದ್ದ ಸುರಂಗವನ್ನು ಪತ್ತೆ ಹಚ್ಚಲಾಗಿದೆ’ ಎಂದಿದ್ದಾರೆ.
ಬಿಎಸ್ಎಫ್ ಹಾಗೂ ಜಮ್ಮು ಕಾಶ್ಮೀರ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದರು.
‘ನಗರೋಟಾ ಎನ್ಕೌಂಟರ್ನಲ್ಲಿ ಭಾಗಿಯಾದ ಉಗ್ರರು ಈ ಸುರಂಗವನ್ನು ಇತ್ತೀಚೆಗೆ ಬಳಸಿರಬಹುದು ಎನಿಸುತ್ತಿದೆ. ಅವರನ್ನು ಇಲ್ಲಿಂದ ಹೆದ್ದಾರಿವರೆಗೆ ಕರೆಯದೊಯ್ಯಲು ಮಾರ್ಗದರ್ಶಕರೂ ಇಲ್ಲಿ ಇರಬಹುದು ಎಂದು ಅಂದಾಜಿಸಿದ್ದೇವೆ’ ಎಂದು ಬಿಎಸ್ಎಫ್ನ ಇನ್ಸ್ಪೆಕ್ಟರ್ ಜನರಲ್ ಎನ್ಎಸ್ ಜಮ್ವಾಲ್ ತಿಳಿಸಿದ್ದಾರೆ.
Comments are closed.