ರಾಷ್ಟ್ರೀಯ

ಸತತ 4 ನೇ ಬಾರಿ ಬಿಹಾರ ಸಿಎಂ ಆಗಿ ನಾಳೆ ನಿತೀಶ್ ಕುಮಾರ್ ಪ್ರಮಾಣ ವಚನ: ಬಿಜೆಪಿಯ ಸುಶೀಲ್ ಮೋದಿ ಡಿಸಿಎಂ

Pinterest LinkedIn Tumblr

ಪಾಟ್ನಾ: ನಿತೀಶ್ ಕುಮಾರ್ ಅವರು ನಾಲ್ಕನೆ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಶಾಸಕಾಂಗ ಪಕ್ಷದ ಸಭೆಯ ನಂತರ ಎನ್ ಡಿಎ ಘೋಷಿಸಿದೆ.

ವಿಧಾನಸಭಾ ಚುನಾವಣೆಯಲ್ಲಿ ಜೆಡಿಯುಗೆ ಕಡಿಮೆ ಮತ ಬಂದ ಹಿನ್ನೆಲೆಯಲ್ಲಿ ನಿತೀಶ್ ಕುಮಾರ್ ಸಿಎಂ ಪಟ್ಟ ಕೈತಪ್ಪಬಹುದು ಎಂದು ಹರಿದಾಡುತ್ತಿದ್ದ ವದಂತಿಗೆ ತೆರೆ ಬಿದ್ದಿದೆ.

ಫಲಿತಾಂಶ ಏನೇ ಬಂದರೂ ನಿತೀಶ್ ಅವರೇ ಸಿಎಂ ಎಂದು ಹೇಳಿದ್ದ ಬಿಜೆಪಿ ತನ್ನ ಮಾತು ಉಳಿಸಿಕೊಂಡಿದೆ. ಇವತ್ತು ನಡೆದ ಎನ್​ಡಿಎ ಸಭೆಯಲ್ಲಿ ನಿತೀಶ್ ಕುಮಾರ್ ಅವರನ್ನೇ ಸಿಎಂ ಆಗಿ ಆಯ್ಕೆ ಮಾಡಲಾಯಿತು.

ನ.16 ರಂದು ನಿತೀಶ್ ಕುಮಾರ್ ಪ್ರಮಾಣ ವಚನ ಸ್ವೀಕರಿಸಲಿದ್ದು, ಉಪಮುಖ್ಯಮಂತ್ರಿಯಾಗಿ ಸುಶೀಲ್ ಮೋದಿ ಮುಂದುವರೆಯಲಿದ್ದಾರೆ.

ಮೂಲಗಳ ಪ್ರಕಾರ, ನಿತೀಶ್ ಅವರು ಸಿಎಂ ಆಗುವುದು ಪೂರ್ವನಿಶ್ಚಿತ. ಸಭೆಯಲ್ಲಿ ಅಧಿಕೃತವಾಗಿ ಅವರ ಆಯ್ಕೆ ನಡೆಯಿತಷ್ಟೇ ಎನ್ನಲಾಗಿದೆ. ಇದರೊಂದಿಗೆ ನಿತೀಶ್ ಕುಮಾರ್ ಅವರು ಬಿಹಾರದಲ್ಲಿ ಸತತ ನಾಲ್ಕನೇ ಅವಧಿಗೆ ಮುಖ್ಯಮಂತ್ರಿ ಆಗುತ್ತಿದ್ದಾರೆ. ನಾಳೆ ಅವರು ಸಿಎಂ ಆಗಿ ಪ್ರಮಾಣವಚನ ಸ್ವೀಕರಲಿಸಲಿದ್ದಾರೆ.

ಎನ್​ಡಿಎ ಸಭೆ ಪ್ರಾರಂಭಕ್ಕೆ ಮುನ್ನ ನಡೆದ ಜೆಡಿಯು ಶಾಸಕಾಂಗ ಪಕ್ಷದ ಸಭೆಯಲ್ಲಿ ನಿತೀಶ್ ಅವರನ್ನ ನಾಯಕರನ್ನಾಗಿ ಆರಿಸಲಾಯಿತು. ಬಳಿಕ ಅವರ ಮನೆಯಲ್ಲೇ ಎನ್​ಡಿಎ ಮೈತ್ರಿಕೂಟದ ಸಭೆ ನಡೆದು ಒಮ್ಮತದಿಂದ ಅವರನ್ನ ಸಿಎಂ ಆಗಿ ಆಯ್ಕೆ ಮಾಡಲಾಯಿತು.

ಅಕ್ಟೋಬರ್ 28ರಿಂದ ನವೆಂಬರ್ 7ರವರೆಗೆ ಮೂರು ಹಂತದಲ್ಲಿ ನಡೆದ ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ ನವೆಂಬರ್ 10ರಂದು ಪ್ರಕಟಗೊಂಡಿತು. 243 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಎನ್​ಡಿಎ ಮೈತ್ರಿಕೂಟ 125 ಸ್ಥಾನಗಳನ್ನ ಗೆದ್ದು ಸರಳ ಬಹುಮತ ಪಡೆಯಿತು. ಆರ್​ಜೆಡಿ ನೇತೃತ್ವದ ಮಹಾಘಟಬಂಧನ್ ಮೈತ್ರಿಕೂಟ 110 ಕ್ಷೇತ್ರಗಳನ್ನ ಗೆಲ್ಲುವಲ್ಲಿ ಯಶಸ್ವಿಯಾಯಿತು. ಆದರೆ, ಎನ್​ಡಿಎನಲ್ಲಿ ದೊಡ್ಡಣ್ಣನಂತಿದ್ದು ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಜೆಡಿಯು ಪಕ್ಷ ಕೇವಲ 43 ಸ್ಥಾನ ಪಡೆದರೆ, ಬಿಜೆಪಿ 74 ಸ್ಥಾನಗಳನ್ನ ಜಯಿಸಿತು. ಚಿರಾಗ್ ಪಾಸ್ವಾನ್ ಅವರ ಎಲ್​ಜೆಪಿ ಪಕ್ಷ ಜೆಡಿಯು ವಿರುದ್ಧ ಸ್ಪರ್ಧೆ ಮಾಡಿದ ಹಿನ್ನೆಲೆಯಲ್ಲಿ ಆ ಪಕ್ಷಕ್ಕೆ ಹೆಚ್ಚು ಸ್ಥಾನ ದಕ್ಕಲಿಲ್ಲ ಎಂಬ ವಿಮರ್ಶೆಗಳು ನಡೆದಿವೆ. ಅದೇನೇ ಇದ್ದರೂ ನಿತೀಶ್ ಕುಮಾರ್ ಅವರೇ ಸಿಎಂ ಆಗುತ್ತಾರೆ ಎಂದು ಬಿಜೆಪಿಯ ಅನೇಕ ನಾಯಕರು ಅನೇಕ ಬಾರಿ ಹೇಳುತ್ತಲೇ ಬಂದಿದ್ದರು. ಅದೀಗ ನಿಜವಾಗಿದೆ.

ಇನ್ನು, ಈ ಹಿಂದೆ ನಿತೀಶ್ ಕುಮಾರ್ ಅವರಿಗೆ ಡಿಸಿಎಂ ಆಗಿ ಹೆಸರು ಮಾಡಿದ್ದ ಬಿಜೆಪಿಯ ಸುಶೀಲ್ ಮೋದಿ ಮತ್ತೆ ಅದೇ ಹುದ್ದೆಗೆ ಮರಳಿರುವುದು ಗಮನಾರ್ಹ.

Comments are closed.