ರಾಷ್ಟ್ರೀಯ

ಬಿಹಾರದಲ್ಲಿ ಎನ್‌ಡಿಎಗೆ ಸ್ಪಷ್ಟ ಬಹುಮತ; ಸಿಎಂ ಸ್ಥಾನ ಉಳಿಸಿಕೊಳ್ಳುವಲ್ಲಿ ನಿತೀಶ್‍ ಕುಮಾರ್ ಯಶಸ್ವಿ

Pinterest LinkedIn Tumblr

ಪಾಟ್ನಾ: ರಾಷ್ಟ್ರ ರಾಜಕಾರಣದಲ್ಲಿ ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ ಭಾರೀ ಕುತೂಹಲ ಕೆರಳಿಸಿದ್ದು, ಸಾಮಾನ್ಯವಾಗಿ ಬೇಗನೆ ಪ್ರಕಟವಾಗುತ್ತಿದ್ದ ಫಲಿತಾಂಶ ಈ ಬಾರಿ ರೋಚಕ ಟ್ವಿಸ್ಟ್ ಕಂಡು ಕೊನೆಗೂ ಎನ್ ಡಿಎಗೆ ಸ್ಪಷ್ಟ ಬಹುಮತ ಸಿಕ್ಕಿದೆ.

ಎಲ್ಲಾ ಸಮೀಕ್ಷೆಗಳನ್ನು ತಲೆಕೆಳಗಾಗಿಸಿ ಎನ್‍ಡಿಎ ಮೈತ್ರಿಕೂಟ ಬಿಹಾರದಲ್ಲಿ ಗೆಲುವಿನ ಹಾರವನ್ನ ತನ್ನ ಕೊರಳಿಗೆ ಹಾಕಿಕೊಂಡಿದೆ. ಮಂಗಳವಾರ ಬೆಳಗ್ಗಿನಿಂದ ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ ಭಾರೀ ಕುತೂಹಲಕ್ಕೆ ಕಾರಣವಾಗಿ ಕೊನೆಗೆ ಮಧ್ಯರಾತ್ರಿ 2 ಗಂಟೆ ವೇಳೆಗೆ ಎನ್‍ಡಿಎ ಮೈತ್ರಿಕೂಟ ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಬಿಹಾರ ಚುನಾವಣೆ ಫಲಿತಾಂಶದಲ್ಲಿ ಬೆಳಗ್ಗಿನಿಂದ ಹಾವು ಏಣಿ ಆಟ ಶುರುವಾಗಿತ್ತು. ಆರಂಭದಿಂದ ಮಹಾಘಟಬಂಧನ್ ವಿರುದ್ಧ ಎನ್ ಡಿಎ ಮುನ್ನಡೆ ಸಾಧಿಸಿದ್ದರೂ, ಸರಳ ಬಹುಮತದಿಂದ ಕುಸಿಯುತ್ತಿತ್ತು. ಇದೀಗ ಅಂತಿಮವಾಗಿ ಎನ್ ಡಿಎ 125 ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸಿದೆ.

ಇನ್ನು ಪಕ್ಷಗಳ ನಡುವಿನ ಸ್ಪರ್ಧೆಯಲ್ಲಿ ಆರ್ ಜೆಡಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆರ್ ಜೆಡಿ ಬರೋಬ್ಬರಿ 75 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಆದರೆ ಕಳೆದ ಚುನಾವಣೆಯಲ್ಲಿ 80 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.

ಫಲಿತಾಂಶದ ಆರಂಭದಲ್ಲಿ 80 ಸ್ಥಾನಗಳೊಂದಿಗೆ ಮುನ್ನಡೆ ಸಾಧಿಸಿದ್ದ ಅಂತಿಮವಾಗಿ ಬಿಜೆಪಿ 74 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಇನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷ ಹಿಂದಿಗಿಂತ ಹೆಚ್ಚು ಸ್ಥಾನಗಳನ್ನು ಕಳೆದುಕೊಂಡು 43 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಇನ್ನು ಕಾಂಗ್ರೆಸ್ 19 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ನಾಲ್ಕನೇ ಸ್ಥಾನದಲ್ಲಿದೆ.

ಕಳೆದ 2015ರ ಬಿಹಾರ ಚುನಾವಣೆಯಲ್ಲಿ ಜೆಡಿಯು 71 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ ಪ್ರಸಕ್ತ ಚುನಾವಣೆಯಲ್ಲಿ ಜೆಡಿಯು 43 ಕ್ಷೇತ್ರಕ್ಕೆ ಕುಸಿದಿದೆ. ಕಳೆದ ಬಾರಿ 53 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿ ಇಂದು 74 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.

ಯಾರಿಗೆ ಎಷ್ಟು ಸ್ಥಾನ?

ಆರ್‌ಜೆಡಿ 75 (-5), ಬಿಜೆಪಿ 74 (+21), ಜೆಡಿಯು 43 (-28), ಕಾಂಗ್ರೆಸ್ 19 (-8), ಎಲ್‌ಜೆಪಿ 1(-1), ಇತರರು 31 (+21).
ಎನ್‌ಡಿಎ: 125 (ಬಿಜೆಪಿ 74, ಜೆಡಿಯು 43, ವಿಐಪಿ 4, ಎಚ್‌ಎಎಂ 4)
ಮಹಾಮೈತ್ರಿಕೂಟ: 110 (ಆರ್‌ಜೆಡಿ 75, ಕಾಂಗ್ರೆಸ್ 19, ಎಡ ಪಕ್ಷಗಳು 16).
ಎಐಎಂಐಎ-5, ಬಿಎಸ್ಪಿ-1, ಎಲ್‌ಜೆಪಿ-1, ಪಕ್ಷೇತರ-1

ಬಿಜೆಪಿಯ ಸಾಧನೆಯೊಂದಿಗೆ ಮತ್ತೆ ಎನ್‌ಡಿಎಗೆ ಜಯ ಸಿಕ್ಕಿದ್ದು, ಹದಿನಾಲ್ಕು ವರ್ಷಗಳ ಬಳಿಕ ಅಧಿಕಾರದ ಚುಕ್ಕಾಣಿ ಹಿಡಿಯುವ ಆರ್‌ಜೆಡಿ ಕನಸು ನುಚ್ಚುನೂರಾಗಿದೆ. ಎನ್‌ಡಿಎ ಗೆಲುವಿನೊಂದಿಗೆ ನಿತೀಶ್ ಆರನೇ ಬಾರಿಗೆ ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ. ಚಿರಾಗ್ ಪಾಸ್ವಾನ್ ನೇತೃತ್ವದ ಎಲ್‌ಜೆಪಿ ಕೇವಲ ಒಂದು ಸ್ಥಾನಕ್ಕೆ ತೃಪ್ತಿಪಟ್ಟಿದೆ.

ಕಾಂಗ್ರೆಸ್ 70 ಸ್ಥಾನಗಳಲ್ಲಿ ಸ್ಪರ್ಧಿಸಿದರೂ ಕೇವಲ 19 ಸ್ಥಾನಗಳಲ್ಲಷ್ಟೇ ಗೆಲುವು ಸಾಧಿಸಲು ಸಾಧ್ಯವಾಗಿದ್ದು, ಇದು ಆರ್‌ಜೆಡಿಯ ಆಸೆಗೆ ತಣ್ಣೀರೆರಚಿದೆ. ಇದಕ್ಕೆ ಪ್ರತಿಯಾಗಿ ಆರ್‌ಜೆಡಿಯ ಇತರ ಮಿತ್ರಪಕ್ಷಗಳು ಉತ್ತಮ ಸಾಧನೆ ಮಾಡಿದ್ದು, ಸಿಪಿಐ (ಎಂ-ಎಲ್) ಲಿಬರೇಶನ್ 12 ಸ್ಥಾನಗಳನ್ನು ಬುಟ್ಟಿಗೆ ಹಾಕಿಕೊಂಡಿದೆ. ಸಿಪಿಐ ಹಾಗೂ ಸಿಪಿಎಂ ತಲಾ ಎರಡು ಸ್ಥಾನಗಳಲ್ಲಿ ಜಯ ಸಾಧಿಸಿವೆ.

Comments are closed.