ರಾಷ್ಟ್ರೀಯ

ಕೊರೋನಾ ಮಹಾಮಾರಿಗೆ ತಮಿಳುನಾಡು ಕೃಷಿ ಸಚಿವ ದೊರೈಕಣ್ಣು ಬಲಿ

Pinterest LinkedIn Tumblr

ಚೆನ್ನೈ: ಮಹಾಮಾರಿ ಕೊರೋನಾ ಸೋಂಕಿಗೆ ತಮಿಳುನಾಡು ಕೃಷಿ ಸಚಿವ ಆರ್. ದೊರೈಕಣ್ಣು ಬಲಿಯಾಗಿದ್ದಾರೆ.

72 ವರ್ಷದ ಆರ್. ದೊರೈಕಣ್ಣು ತೀವ್ರ ಉಸಿರಾಟದ ತೊಂದರೆಯಿಂದ ಅ. 13ರಂದು ಆಸ್ಪತ್ರೆಗೆ ಸೇರಿದ್ದರು. ತಪಾಸಣೆ ವೇಳೆ ಅವರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ವಿಲ್ಲೂಪುರಂ ಸರ್ಕಾರಿ ಮೆಡಿಕಲ್ ಕಾಲೇಜಿನ ಆಸ್ಪತ್ರೆಗೆ ದಾಖಲಾಗಿದ್ದ ದೊರೈಕಣ್ಣು ಅವರ ಆರೋಗ್ಯ ತೀರಾ ಹದಗೆಟ್ಟಿದ್ದರಿಂದ ಕಾವೇರಿ ಆಸ್ಪತ್ರೆಗೆ ಶಿಫ್ಟ್​ ಮಾಡಲಾಗಿತ್ತು. ಅವರು ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸಾವನ್ನಪ್ಪಿದ್ದಾರೆ.

ಸಚಿವರ ಸಾವಿನ ಸುದ್ದಿಯನ್ನು ಖಚಿತಪಡಿಸಿರುವ ಕಾವೇರಿ ಆಸ್ಪತ್ರೆಯ ಕಾರ್ಯಕಾರಿ ನಿರ್ದೇಶಕ ಅರವಿಂದನ್ ಸೆಲ್ವರಾಜ್, ತಮಿಳುನಾಡಿನ ಕೃಷಿ ಸಚಿವ ಆರ್​. ದೊರೈಕಣ್ಣು ಶನಿವಾರ ರಾತ್ರಿ 11.30ಕ್ಕೆ ಸಾವನ್ನಪ್ಪಿದ್ದಾರೆ. ಅವರ ಕುಟುಂಬಸ್ಥರಿಗೆ ಈ ನೋವನ್ನು ಸಹಿಸಿಕೊಳ್ಳುವ ಶಕ್ತಿ ಸಿಗಲಿ ಎಂದು ದೇವರಲ್ಲಿ ಕೋರುತ್ತೇವೆ ಎಂದು ಅವರು ತಿಳಿಸಿದ್ದಾರೆ.

ಆರ್​. ದೊರೈಕಣ್ಣು ಅವರ ಆರೋಗ್ಯ ಸ್ಥಿತಿ ಬಹಳ ಚಿಂತಾಜನಕವಾಗಿದೆ. ವೆಂಟಿಲೇಟರ್ ಅಳವಡಿಸಿದ್ದರೂ ಅವರ ಆರೋಗ್ಯ ಚಿಂತಾಜನಕವಾಗಿದೆ ಎಂದು ನಿನ್ನೆ ಮಧ್ಯಾಹ್ನವೇ ಆಸ್ಪತ್ರೆಯಿಂದ ಹೆಲ್ತ್​ ಬುಲೆಟಿನ್ ಹೊರಡಿಸಲಾಗಿತ್ತು. 2006ರಿಂದ 201ರವರೆಗೆ ತಮಿಳುನಾಡಿನ ತಂಜಾವೂರು ಜಿಲ್ಲೆಯ ಪಾಪನಾಶಂನಿಂದ ಆರ್​. ದೊರೈಕಣ್ಣು ಶಾಸಕರಾಗಿ ಆಯ್ಕೆಯಾಗಿದ್ದರು. ದಿ. ಜಯಲಲಿತಾ ಅವರ ಸಂಪುಟದಲ್ಲಿಯೂ ಆರ್​. ದೊರೈಕಣ್ಣು ಸಚಿವರಾಗಿ ಅಧಿಕಾರ ನಿರ್ವಹಿಸಿದ್ದರು.

1948ರಲ್ಲಿ ತಂಜಾವೂರಿನಲ್ಲಿ ಜನಿಸಿದ ಆರ್​. ದೊರೈಕಣ್ಣು ಎಐಡಿಎಂಕೆ ಪಕ್ಷದ ಹಿರಿಯ ನಾಯಕರಲ್ಲೊಬ್ಬರು. ಅವರ ಸಾವಿಗೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಪತ್ನಿ ಭಾನುಮತಿ, ನಾಲ್ವರು ಹೆಣ್ಣುಮಕ್ಕಳು ಮತ್ತು ಇಬ್ಬರು ಪುತ್ರರನ್ನು ಆರ್​. ದೊರೈಕಣ್ಣು ಅಗಲಿದ್ದಾರೆ.

Comments are closed.