ರಾಷ್ಟ್ರೀಯ

ಎನ್​ಡಿಎ ಸರ್ಕಾರದ ಅವಧಿಯ ಕಲ್ಲಿದ್ದಲು ಹಗರಣ; ಮಾಜಿ ಕೇಂದ್ರ ಸಚಿವ ದಿಲೀಪ್ ರೇಗೆ 3 ವರ್ಷ ಜೈಲು ಶಿಕ್ಷೆ!

Pinterest LinkedIn Tumblr

ನವ ದೆಹಲಿ: 1999ರ ಜಾರ್ಖಂಡ್ ಕಲ್ಲಿದ್ದಲು ಬ್ಲಾಕ್​ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಸಚಿವ ದಿಲೀಪ್ ರೇ ವಿರುದ್ಧದ ಆರೋಪ ಸಾಬೀತಾಗಿದ್ದ ಹಿನ್ನೆಲೆಯಲ್ಲಿ ಸಿಬಿಐ ವಿಶೇಷ ನ್ಯಾಯಾಲಯವು ಮೂರು ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಿದೆ.

ಸುದೀರ್ಘ ವಿಚಾರಣೆ ಬಳಿಕ ಜಾರ್ಖಂಡ್ ಸಿಬಿಐ ವಿಶೇಷ ನ್ಯಾಯಾಲಯವು ಶಿಕ್ಷೆ ಪ್ರಮಾಣ ಪ್ರಕಟಿಸಿದ್ದು, ಮೂರು ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಿದೆ. ದಿಲೀಪ್ ರೇ ವಿರುದ್ಧದ ಆರೋಪ ಸಾಬೀತಾಗಿದ್ದ ಹಿನ್ನೆಲೆಯಲ್ಲಿ ಕಳೆದ ವಾರ ಕೋರ್ಟ್ ಇವರನ್ನು ಅಪರಾಧಿ ಎಂದು ಘೋಷಿಸಿತ್ತು. ಆದರೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿರಲಿಲ್ಲ. ಇಂದು ಶಿಕ್ಷೆಯ ಪ್ರಮಾಣ ಪ್ರಕಟಿಸಲಾಗಿದ್ದು, ಮೂರು ವರ್ಷಶಿಕ್ಷೆ ವಿಧಿಸಲಾಗಿದೆ.

ದಿಲೀಪ್​ ರೇ ಮಾಜಿ ಪ್ರಧಾನಿ ದಿವಂಗತ ಅಟಲ್​ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಕಲ್ಲಿದ್ದಲು ಇಲಾಖೆ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು ಎಂಬುದು ಉಲ್ಲೇಖಾರ್ಹ. ಅಸಲಿಗೆ ಈ ಪ್ರಕರಣವನ್ನು ಸಿಬಿಐ ಗೆ ವಹಿಸಲಾಗಿತ್ತು. ಈ ಮೊದಲು ಪ್ರಕರಣವನ್ನು ವಿಚಾರಣೆ ನಡೆಸಿದ್ದ ಸಿಬಿಐ ನ್ಯಾಯಾಲಯ ಆರೋಪಿಗಳನ್ನು ತಪ್ಪಿತಸ್ಥರೆಂದು ಘೋಷಿಸಿತ್ತು. ಇಂದಿಗೆ ತೀರ್ಪು ಕಾದಿರಿಸಿದ್ದ ದೆಹಲಿ ನ್ಯಾಯಾಲಯ ಆರೋಪಿಗಳು ಖುದ್ದು ಹಾಜರಾಗುವಂತೆ ಸೂಚಿಸಿ ತೀರ್ಪು ನೀಡಿದೆ.

ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಕಲ್ಲಿದ್ದಲು ರಾಜ್ಯ ಸಚಿವನಾಗಿದ್ದ ದಿಲೀಪ್ ರೇ ಮತ್ತು ಆ ಸಮಯದಲ್ಲಿ ಕಲ್ಲಿದ್ದಲು ಸಚಿವಾಲಯದ ಇಬ್ಬರು ಹಿರಿಯ ಅಧಿಕಾರಿಗಳಾದ ಪ್ರದೀಪ್ ಕುಮಾರ್ ಬ್ಯಾನರ್ಜಿ ಮತ್ತು ನಿತ್ಯ ನಂದ್ ಗೌತಮ್ ಮತ್ತು ಕ್ಯಾಸ್ಟ್ರಾನ್ ಟೆಕ್ನಾಲಜೀಸ್ ಲಿಮಿಟೆಡ್‌ನ (ಸಿಟಿಎಲ್) ನಿರ್ದೇಶಕ ಮಹೇಂದ್ರ ಕುಮಾರ್ ಅಗರ್‌ವಾಲ್ಲಾರಿಗೆ ಸಿಬಿಐ ಜೀವಾವಧಿ ಶಿಕ್ಷೆ ಕೋರಿತ್ತು.

ಆದರೆ, ಶಿಕ್ಷೆಗೊಳಗಾದ ವ್ಯಕ್ತಿಗಳು ತಮ್ಮ ವೃದ್ಧಾಪ್ಯವನ್ನು ಪರಿಗಣಿಸಿ ಮೃದುವಾದ ದೃಷ್ಟಿಕೋನವನ್ನು ತೆಗೆದುಕೊಳ್ಳಬೇಕೆಂದು ನ್ಯಾಯಾಲಯವನ್ನು ಒತ್ತಾಯಿಸಿದ ಕಾರಣ ಆರೋಪಿಗೆ ಮೂರು ವರ್ಷ ಮಾತ್ರ ಜೈಲು ಶಿಕ್ಷೆಯಾಗಿದೆ ಎನ್ನಲಾಗುತ್ತಿದೆ.

ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಭಾರತ್ ಪ್ರಶರ್ ಅವರು ಶಿಕ್ಷೆ ವಿಧಿಸುವಾಗ, ಶಿಕ್ಷೆಗೊಳಗಾದ ಎಲ್ಲ ವ್ಯಕ್ತಿಗಳ ವಿರುದ್ಧ ತಲಾ ರೂ.10 ಲಕ್ಷ ದಂಡವನ್ನೂ ವಿಧಿಸಿದ್ದಾರೆ.

ಮಾಜಿ ಸಚಿವ ದಿಲಿಪ್ ರೇಗೆ ಭಾರತೀಯ ದಂಡ ಸಂಹಿತೆಯ (ಐಪಿಸಿ) 409 ಸೇರಿದಂತೆ ವಿವಿಧ ವಿಭಾಗಗಳ ಅಡಿಯಲ್ಲಿ ಶಿಕ್ಷೆಗೊಳಪಡಿಸಲಾಗಿದೆ, ಇದು ಸಾರ್ವಜನಿಕ ಸೇವಕರ ನಂಬಿಕೆ ದ್ರೋಹದಂತಹ ಕ್ರಿಮಿನಲ್ ಉಲ್ಲಂಘನೆಗೆ ಸಂಬಂಧಿಸಿದೆ.

ಈ ಪ್ರಕರಣವು ಜಾರ್ಖಂಡ್‌ನ ಗಿರಿಡಿಹ್‌ನಲ್ಲಿರುವ ಬ್ರಹ್ಮದಿಹಾ ಕಲ್ಲಿದ್ದಲು ಬ್ಲಾಕ್ ಅನ್ನು 1999 ರಲ್ಲಿ ಸಿಟಿಎಲ್‌ಗೆ ಹಂಚಿಕೆಗೆ ಸಂಬಂಧಿಸಿದೆ. “ಕಾನೂನುಗಳನ್ನು ಗಾಳಿಗೆ ತೂರಿ, ಅಪ್ರಾಮಾಣಿಕವಾಗಿ ರಾಷ್ಟ್ರೀಕೃತವಲ್ಲದ ಕಲ್ಲಿದ್ದಲು ಗಣಿ ಪ್ರದೇಶಗಳನ್ನು ಸಿಟಿಎಲ್‌ಗೆ ವಹಿಸಿಕೊಡಲಾಗಿದೆ” ಎಂದು ನ್ಯಾಯಾಧೀಶರು ಹೇಳಿದ್ದಾರೆ.

Comments are closed.