ಬಿಕಾನೆರ್: 2 ಲಕ್ಷ ವರ್ಷಗಳ ಹಿಂದೆ ರಾಜಸ್ಥಾನದ ಬಿಕಾನೆರ್ ಬಳಿಯ ಥಾರ್ ಮರುಭೂಮಿ ಸುತ್ತ ನದಿಯೊಂದು ಹರಿಯುತ್ತಿದ್ದ ಕುರುಹು ಪತ್ತೆಯಾಗಿದೆ.
ಈ ಕುರಿತು ಕ್ವಾಟರ್ನರಿ ಸೈನ್ಸ್ ರಿವ್ಯೂಸ್ ಜರ್ನಲ್‌ನಲ್ಲಿ ಸಂಶೋಧನಾ ವರದಿಯೊಂದು ಪ್ರಕಟವಾಗಿದ್ದು, ಮಧ್ಯ ಥಾರ್ ಮರುಭೂಮಿಯ ನಲ್ ಕ್ವಾರಿಯಲ್ಲಿ 1,72,000 ವರ್ಷಗಳ ಹಿಂದೆ ನದಿಯೊಂದು ಹರಿಯುತ್ತಿತ್ತು ಎಂದು ಹೇಳಲಾಗಿದೆ.
ಜರ್ಮನಿಯ ದಿ ಮ್ಯಾಕ್ಸ್ ಪ್ಲ್ಯಾಂಕ್ ಇನ್ಸ್ಟಿಟ್ಯೂಟ್ ಫಾರ್ ದಿ ಸೈನ್ಸ್ ಆಫ್ ಹ್ಯೂಮನ್ ಹಿಸ್ಟರಿ, ತಮಿಳುನಾಡಿನ ಅಣ್ಣಾ ವಿಶ್ವವಿದ್ಯಾಲಯ ಮತ್ತು ಐಐಎಸ್ಇಆರ್ ಕೋಲ್ಕತ್ತಾದ ಸಂಶೋಧಕರು ನಡೆಸಿದ ಜಂಟಿ ಸಂಶೋಧನೆಯಲ್ಲಿ, ಶಿಲಾಯುಗದ ಕಾಲದಲ್ಲಿ ಥಾರ್ ಮರುಭೂಮಿ ಪ್ರದೇಶದಲ್ಲಿ ನದಿ ಹರಿಯುತ್ತಿತ್ತು ಎಂಬದು ಪತ್ತೆಯಾಗಿದೆ.
ಅಲ್ಲದೇ ಈ ಪ್ರದೇಶದಲ್ಲಿ ಅಂದಿನ ಜನಜೀವನ ಈಗಿನ ಪರಿಸ್ಥಿತಿಗಳಿಗಿಂತ ಸಂಪೂರ್ಣ ಭಿನ್ನವಾಗಿತ್ತು ಎಂಬುದು ಸಂಶೋಧನೆಗಳಿಂದ ತಿಳಿದು ಬರುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಪುರಾತನ ನದಿ ಪ್ರಸ್ತುತ ಹರಿಯುತ್ತಿರುವ ನದಿಯಿಂದ ಸುಮಾರು 200 ಕಿ.ಮೀ ದೂರದಲ್ಲಿದ್ದು, ಈ ಭಾಗದ ಪ್ಯಾಲಿಯೊಲಿಥಿಕ್ ಕಾಲದ ಜನರ ಜೀವಸೆಲೆಯಾಗಿತ್ತು ಎಂಬುದು ಸಂಶೋಧನೆಗಳಿಂದ ದೃಢಪಟ್ಟಿದೆ.
ಈ ಕುರಿತು ಮಾತನಾಡಿರುವ ದಿ ಮ್ಯಾಕ್ಸ್ ಪ್ಲ್ಯಾಂಕ್ ಇನ್ಸ್ಟಿಟ್ಯೂಟ್ ಫಾರ್ ದಿ ಸೈನ್ಸ್ ಆಫ್ ಹ್ಯೂಮನ್‌ನ ಜಿಂಬಾಬ್ ಬ್ಲಿಂಕ್‌ಹಾರ್ನ್, ಥಾರ್ ಮರುಭೂಮಿ ಶ್ರೀಮಂತ ಇತಿಹಾಸವನ್ನು ಹೊಂದಿತ್ತು ಎಂಬುದಕ್ಕೆ ಈಗ ಪತ್ತೆಯಾಗಿರುವ ನದಿ ಕುರುಹು ಸಾಕ್ಷಿ ಎಂದು ಹೇಳಿದ್ದಾರೆ.
ಈ ನದಿ ಸಕ್ರಿಯವಾಗಿದ್ದ ಕಾಲಮಿತಿಯು ಈ ಪ್ರದೇಶದಲ್ಲಿಅಂದು ವಾಸವಿದ್ದ ಮಾನವರ ಚಟುವಟಿಕೆಗಳ ಕುರಿತು ಅಧ್ಯಯನ ನಡೆಸಲು ಸಹಾಯಕಾರಿಯಾಗಿದ್ದು, ಆಫ್ರಿಕಾದಿಂದ ಭಾರತದತ್ತ ವಲಸೆ ಬಂದ ಆದಿ ಮಾನವರ ಕುರಿತು ಬಹಳಷ್ಟು ಮಾಹಿತಿಯನ್ನು ಒದಗಿಸುತ್ತದೆ ಎಂದು ಸಂಶೋಧಕರು ಸ್ಪಷ್ಟಪಡಿಸಿದ್ದಾರೆ.