ರಾಷ್ಟ್ರೀಯ

ಅನ್ಯ ಧರ್ಮೀಯ ಯುವತಿ ಜೊತೆ ಗೆಳೆತನ: ದಿಲ್ಲಿ ವಿದ್ಯಾರ್ಥಿ ಮರ್ಡರ್

Pinterest LinkedIn Tumblr


ನವದೆಹಲಿ: ಅನ್ಯ ಧರ್ಮೀಯ ಯುವತಿಯ ಜೊತೆ ಗೆಳೆತನವು 18 ವರ್ಷದ ವಿದ್ಯಾರ್ಥಿ ಸಾವಿಗೆ ಎಡೆ ಮಾಡಿಕೊಟ್ಟ ದಾರುಣ ಘಟನೆ ದೆಹಲಿಯ ಆದರ್ಶ್ ನಗರ್​ನಲ್ಲಿ ನಡೆದಿದೆ.

ದೆಹಲಿ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಓಪನಿಂಗ್ ಲರ್ನಿಂಗ್ ವಿಭಾಗದ ವಿದ್ಯಾರ್ಥಿ ರಾಹುಲ್ ರಾಜಪೂತ್ ಹತ್ಯೆಯಾದ ಯುವಕ. ಪೊಲೀಸರು ಮೊಹಮ್ಮದ್ ರಾಜ್, ಮನ್ವರ್ ಹುಸೇನ್ ಹಾಗೂ ಇತರ ಮೂವರು ಅಪ್ರಾಪ್ತ ಹುಡುಗರನ್ನು ಬಂಧಿಸಿದ್ಧಾರೆ. ಅಪ್ತಾಪ್ತರನ್ನು ಬಾಲಗೃಹಕ್ಕೆ ಕಳುಹಿಸಲಾಗಿದೆ. ಹುಡುಗಿಯ ಕಡೆಯವರು ಈ ಕೃತ್ಯ ಎಸಗಿದ್ಧಾರೆನ್ನಲಾಗಿದೆ. ರಾಹುಲ್ ರಾಜಪೂತ್​ನ ಮೇಲೆ ಐವರು ಸೇರಿ ಹಲ್ಲೆ ನಡೆಸಿದ್ದಾರೆ. ಬಳಿಕ ಮೂಳೆ ಮುರಿತದಿಂದ ರಾಹುಲ್ ಕೊನೆಯುಸಿರೆಳೆದಿರುವುದು ತಿಳಿದುಬಂದಿದೆ. ಶವಪರೀಕ್ಷೆ ವರದಿಗಾಗಿ ಎದುರುನೋಡುತ್ತಿರುವ ಪೊಲೀಸರು ಐಪಿಸಿ ಸೆಕ್ಷನ್ 34 ಮತ್ತು 302 ಅಡಿ ಪ್ರಕರಣ ದಾಖಲಿಸಿಕೊಂಡಿದ್ಧಾರೆ. ಆದರೆ, ಈ ಪ್ರಕರಣಕ್ಕೆ ಕೋಮುಬಣ್ಣ ಬೇಡ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮನವಿ ಮಾಡಿದ್ದಾರೆ. ಹಾಗೆಯೇ, ರಾಹುಲ್ ತಂದೆ ಕೂಡ ಕೋಮು ವಿಚಾರವನ್ನು ಪ್ರಕರಣಕ್ಕೆ ಅಂಟಿಸಬೇಡಿ ಎಂದು ಮಾಧ್ಯಮಗಳನ್ನ ಕೇಳಿಕೊಂಡಿದ್ದಾರೆ.

ಅನ್ಯಧರ್ಮೀಯ ಹುಡುಗಿ ಜೊತೆ ರಾಹುಲ್ ಸ್ನೇಹ ಹೊಂದಿದ್ದ. ಇಬ್ಬರೂ ಜೊತೆಯಲ್ಲಿ ಓಡಾಡುತ್ತಿದ್ದರು. ಆದರೆ, ಹುಡುಗಿಯ ಮನೆಯವರಿಗೆ ಈ ಸಂಬಂಧ ಇಷ್ಟವಿರಲಿಲ್ಲವೆನ್ನಲಾಗಿದೆ. ಹಲವು ಬಾರಿ ಎಚ್ಚರಿಕೆ ಕೊಟ್ಟರೂ ಅವರಿಬ್ಬರ ಸ್ನೇಹ ಮುಂದುವರಿದಿತ್ತು. ಇದೇ ಬುಧವಾರ ಸಂಜೆ ರಾಹುಲ್​ನನ್ನು ಒಂದು ನಿರ್ದಿಷ್ಟ ಪ್ರದೇಶಕ್ಕೆ ಬರಲು ಹೇಳುತ್ತಾರೆ. ಅಲ್ಲಿಗೆ ಬಂದ ಆತನ ಮೇಲೆ ನಾಲ್ಕೈದು ಮಂದಿ ಹಲ್ಲೆ ನಡೆಸುತ್ತಾರೆ. ಹಲ್ಲೆ ನಡೆಸಿದವರಲ್ಲಿ ಹುಡುಗಿಯ ಸಹೋದರರೂ ಇದ್ದಾರೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಮಾಧ್ಯಮಗಳಿಗೆ ಲಭ್ಯವಿರುವ ಸಿಸಿಟಿವಿ ದೃಶ್ಯದಲ್ಲೂ ಘಟನೆ ವೇಳೆ ರಾಹುಲ್ ಜೊತೆ ಆತನ ಸ್ನೇಹಿತೆಯೂ ಇರುತ್ತಾಳೆ. ಹಲ್ಲೆ ಮಾಡುತ್ತಿದ್ದವರನ್ನು ಆಕೆ ತಡೆಯಲು ಹರಸಾಹಸ ಪಡುತ್ತಿರುವುದು ಈ ದೃಶ್ಯದಲ್ಲಿ ಕಾಣುತ್ತದೆ. ಈ ಹುಡುಗಿ ನೀಡಿದ ಮಾಹಿತಿ ಆಧಾರದ ಮೇಲೆ ಪೊಲೀಸರು ಐವರು ಆರೋಪಿಗಳನ್ನ ಬಂಧಿಸಿದ್ದಾರೆ.

ಮೃತ ರಾಹುಲ್​ನ ಸಂಬಂಧಿಕರು ನೀಡಿರುವ ಹೇಳಿಕೆ ಪ್ರಕಾರ, ರಾಹುಲ್ ಮತ್ತು ಆ ಹುಡುಗಿ ಎರಡು ವರ್ಷದಿಂದ ಪರಿಚಿತರು. ಒಂದೇ ಪ್ರದೇಶದಲ್ಲಿದ್ದರು. ಆದರೆ, ಇವರಿಬ್ಬ ಸ್ನೇಹಕ್ಕೆ ಆಕೆಯ ಮನೆಯವರು, ಅದರಲ್ಲೂ ಆಕೆಯ ಸಹೋದರರು ವಿರೋಧ ಹೊಂದಿದ್ದರೆನ್ನಲಾಗಿದೆ.

ಹಲ್ಲೆ ನಡೆದ ಬಳಿಕ ರಾಹುಲ್ ದೇಹಕ್ಕೆ ಯಾವುದೇ ಗಾಯವಾಗಿದ್ದಂತೆ ಮೇಲ್ನೋಟಕ್ಕೆ ಕಂಡುಬಂದಿರಲಿಲ್ಲ. ಆದರೆ, ಮೈಕೈ ನೋವಾಗುತ್ತಿದೆ ಎಂದು ಒದ್ದಾಡಿದ. ಬಳಿಕ ಕಣ್ಣು ಮಂಜಾಗುತ್ತಿದೆ ಎಂದ ಆತ ವಾಂತಿ ಮಾಡಿಕೊಳ್ಳಲಾರಂಭಿಸಿದ. ನಂತರ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿ ಎಂದು ರಾಹುಲ್​ನ ತಂದೆ ಹೇಳುತ್ತಾರೆ.ಪೋಸ್ಟ್ ಮಾರ್ಟಮ್ ವರದಿ ಪ್ರಕಾರ ರಾಹುಲ್​ನ ಮೂಳೆ ಮುರಿತದಿಂದ ಸಾವನ್ನಪ್ಪಿರುವುದು ತಿಳಿದುಬಂದಿದೆ ಎಂದು ದೆಹಲಿ ವಾಯವ್ಯ ವಿಭಾಗದ ಡಿಸಿಪಿ ವಿಜಯಾಂತ ಆರ್ಯ ಹೇಳುತ್ತಾರೆ.

Comments are closed.