ರಾಷ್ಟ್ರೀಯ

ಪ.ಬಂಗಾಳದಲ್ಲಿ ಹಿಂಸಾಚಾರಕ್ಕೆ ತಿರುಗಿದ ಬಿಜೆಪಿ ‘ನಬನ್ನಾ ಚಲೋ’- ತೇಜಸ್ವಿ ಸೂರ್ಯ ಪ್ರತಿಕ್ರಿಯೆ ಏನು?

Pinterest LinkedIn Tumblr

ಕೋಲ್ಕತ್ತಾ: ಇಂದು ಪ್ರಜಾಪ್ರಭುತ್ವದ ಕರಾಳ ದಿನವಾಗಿದ್ದು ತೃಣಮೂಲ ಕಾಂಗ್ರೆಸ್ ಸರ್ಕಾರವು ತನ್ನ ಅಧಿಕಾರ ಮತ್ತು ಗೂಂಡಾಗಳನ್ನು ಬಳಸಿಕೊಳ್ಳುತ್ತಿರುವ ರೀತಿ ನಿಜಕ್ಕೂ ಸರಿಯಲ್ಲ. ಆದರೆ ಇದ್ಯಾವುದಕ್ಕೂ ಹೆದರಲ್ಲ… ಇದು ನಮ್ಮ ಸಮಾವೇಶದ ಆರಂಭವಾಗಿದೆ ಎಂದು ಪಶ್ಚಿಮ ಬಂಗಾಳದಲ್ಲಿ ನಬನ್ನಾ ಚಲೋ ಮೆರವಣಿಗೆ ಆಯೋಜಿಸಿದ್ದ ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಕಿಡಿಕಾರಿದ್ದಾರೆ.

ಬಿಜೆಪಿ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ನಡೆದ ಹಿಂಸಾಚಾರದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವ ಮೋರ್ಚಾದ ಅಧ್ಯಕ್ಷಗಿರಿ ಸಿಕ್ಕ ಬಳಿಕ ಇದು ನನ್ನ ಮೊದಲ ಜಾಥಾ. ಈ ರೀತಿಯ ಹಿಂಸಾಚಾರ ಮತ್ತು ದೌರ್ಜನ್ಯಗಳು ಪಶ್ಚಿಮ ಬಂಗಾಳದ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಾವು ಜಯಗಳಿಸಿದ ಬಳಿಕ ನಿಂತೇ ನಿಲ್ಲುತ್ತವೆ ಎಂದು ಹೇಳಿದರು.

ಪಶ್ಚಿಮ ಬಂಗಾಳದಲ್ಲಿ ಹಮ್ಮಿಕೊಂಡಿದ್ದ ನಬನ್ನಾ ಚಲೋ ರ‍್ಯಾಲಿ ಹಿಂಸಾಚಾರಕ್ಕೆ ತಿರುಗಿದೆ. ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷರಾಗಿ ಬೆಂಗಳೂರು ಸಂಸದ ತೇಜಸ್ವಿ ಸೂರ್ಯ ಅಧಿಕಾರ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ದೀದಿ ನಾಡಲ್ಲಿ ರಾಜಕೀಯ ಹೋರಾಟ ಆರಂಭಿಸಿದ್ದರು. ಪ್ರತಿಭಟನೆ ವೇಳೆ ಬಿಜೆಪಿ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದಿದ್ದು, ಹೌರಾದಲ್ಲಿ ಮೆರವಣಿಗೆಯನ್ನು ತಡೆಯಲು ಪೊಲೀಸರು ಮುಂದಾಗಿದ್ದಾರೆ. ಈ ವೇಳೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಘರ್ಷಣೆ ಉಂಟಾಗಿದೆ. ಈ ವೇಳೆ ಕಲ್ಲು ತೂರಾಟ, ಅಶ್ರುವಾಯು ಪ್ರಯೋಗ ನಡೆದಿದೆ. ಘಟನೆಯಲ್ಲಿ ಬಿಜೆಪಿಯ ಅನೇಕ ಕಾರ್ಯಕರ್ತರು ಗಾಯಗೊಂಡಿದ್ದಾರೆ.

ಪಶ್ಚಿಮ ಬಂಗಾಳ ಬಿಜೆಪಿ ನಡೆಸಿದ ಪ್ರತಿಭಟನಾ ಮೆರವಣಿಗೆ ಹಿಂಸಾಚಾರಕ್ಕೆ ತಿರುಗಿದ್ದು, ಈ ವೇಳೆ ಟಿಎಂಸಿ ಗೂಂಡಾಗಳು ನಮ್ಮ ರ‍್ಯಾಲಿಯ ಮೇಲೆ ಕಂಟ್ರಿ ಬಾಂಬ್‌ಗಳನ್ನು ಎಸೆದಿದ್ದಾರೆ ಎಂದು ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಫ್ಯಾಸಿಸಂ ಅಂದ್ರೆ ಇದೇ. ನಮ್ಮ ರ‍್ಯಾಲಿ ವೇಳೆ ಟಿಎಂಸಿ ಗೂಂಡಾಗಳು ಛಾವಣಿಯಿಂದ ಕಂಟ್ರಿ ಬಾಂಬ್‌ಗಳನ್ನು ಎಸೆದಿದ್ದಾರೆ. ಶಾಂತಿಯುತ ಪ್ರತಿಭಟನೆಯ ವಿರುದ್ಧ ಅಶ್ರುವಾಯು ಪ್ರಯೋಗ ಮಾಡಿದ್ದಾರೆ. ನಿರಂಕುಶಾಧಿಕಾರಿಯ ಆಡಳಿತದ ಅಂತ್ಯ ಸಮೀಪಿಸುತ್ತಿದೆ ಎಂದು ಕಿಡಿಕಾರಿದ್ದಾರೆ.

 

Comments are closed.