ಲಂಡನ್: ನಟಿ ಮತ್ತು ಸಂಸದೆ ನುಸ್ರತ್ ಜಹಾನ್ ತಮ್ಮ ಇನ್ಸ್ಟಾಗ್ರಾಂನಲ್ಲಿ ದುರ್ಗಾದೇವಿಯ ಅವತಾರ ಹಾಕಿ ಪೋಸ್ ಕೊಟ್ಟಿರುವುದಕ್ಕೆ ಮುಸ್ಲಿಮರಿಂದ ಜೀವಬೆದರಿಕೆಯೊಡ್ಡಿರುವ ಕುರಿತು ವರದಿಯಾಗಿದೆ.
ಮುಸ್ಲಿಂ ಧರ್ಮದ ಪರಿವಾರದಲ್ಲಿ ಹುಟ್ಟಿ ಹಿಂದುವನ್ನು ಮದುವೆಯಾಗಿರುವ ನುಸ್ರತ್. ತಮಗೆ ರಕ್ಷಣೆ ನೀಡುವಂತೆ ಲಂಡನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಕೋರಿದ್ದಾರೆ. ಸದ್ಯ ಲಂಡನ್ನಲ್ಲಿ ಬಂಗಾಳಿ ಚಲನಚಿತ್ರದ ಶೂಟಿಂಗ್ನಲ್ಲಿ ನಿರತರಾಗಿರುವ ನಟಿ, ಅಲ್ಲಿಯ ಭಾರತೀಯ ರಾಯಭಾರ ಕಚೇರಿಗೆ ಮನವಿ ಸಲ್ಲಿಸಿದ್ದಾರೆ. ಜತೆಗೆ ಬಂಗಾಳ ಸರ್ಕಾರವನ್ನೂ ಕೋರಿದ್ದಾರೆ.
ಇವರು ಈ ಹಿಂದೆ ಕುಂಕುಮ, ಮಂಗಳಸೂತ್ರ ಧರಿಸಿ ಪತಿ ನಿಖಿಲ್ ಜೈನ್ ಜತೆ ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಇದನ್ನು ಕಂಡ ಮುಸ್ಲಿಂ ಸಂಪ್ರದಾಯವಾದಿಗಳು ನುಸ್ರತ್ ಮೇಲೆ ಹರಿಹಾಯ್ದಿದ್ದರು. ‘ಪಶ್ಚಿಮ ಬಂಗಾಳದಲ್ಲಿ ನಾವೆಲ್ಲರೂ ಒಟ್ಟಾಗಿ ದುರ್ಗಾಪೂಜೆ ಕೈಗೊಳ್ಳುತ್ತೇವೆ. ಇದು ಒಗ್ಗಟ್ಟಿನ ಭಾರತದ ಸೂಚಕವಾಗಿದೆ’ ಎಂದು ನುಸ್ರತ್ ಅವರಿಗೆ ತಿರುಗೇಟು ನೀಡಿದ್ದರು.
ಆದರೆ ಇದೀಗ ಮತ್ತೆ ಇಂಥವರಿಂದ ತಮಗೆ ಜೀವಬೆದರಿಕೆ ಬರುತ್ತಿದೆ. ನನಗೆ ರಕ್ಷಣೆ ನೀಡಿ ಎಂದು ಕೋರಿದ್ದಾರೆ.
ಮಹಾಲಯ ನಿಮಿತ್ತ ದುರ್ಗಾ ಅವತಾರವಿರುವ ಫೋಟೋಶೂಟ್ ಮಾಡಿಸಿಕೊಂಡು ಅದರ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಅವರು ಹಂಚಿಕೊಂಡಿದ್ದಾರೆ. ಇದಕ್ಕೆ ಹಲವಾರು ಮಂದಿ ಕಿಡಿಕಾರಿ ಕಮೆಂಟ್ ಹಾಕಿದ್ದಾರೆ.
ನಿನಗೆ ಅಲ್ಹಾ ಅಂದರೆ ಭಯವಿಲ್ಲವೆ. ನಿಮ್ಮ ಸಾವಿನ ಸಮಯ ಹತ್ತಿರ ಬಂದಿದೆ. ನಿಮ್ಮ ದೇಹವನ್ನು ಮುಚ್ಚಿಡಲು ಆಗುವುದಿಲ್ಲವೇ ಎಂದು ಕಮೆಂಟ್ ಮಾಡಿದ್ದಾರೆ.