ಮನೋರಂಜನೆ

ಮಣ್ಣಲ್ಲಿ ಮಣ್ಣಾದ ಗಾನ ಗಂಧರ್ವ ಎಸ್ ಪಿ ಬಾಲಸುಬ್ರಹ್ಮಣ್ಯಂ ! ಎಸ್​ಪಿಬಿ ಅವರ ತೋಟದಲ್ಲೇ ನೆರವೇರಿದ ಅಂತ್ಯಕ್ರಿಯೆ

Pinterest LinkedIn Tumblr

ಚೆನ್ನೈ: ಅನಾರೋಗ್ಯದಿಂದ ಶುಕ್ರವಾರ ಮಧ್ಯಾಹ್ನ ಮೃತರಾದ ಮೇರು ಗಾಯಕ ಎಸ್‌ಬಿ ಬಾಲಸುಬ್ರಹ್ಮಣ್ಯಂ ಅವರ ಅಂತ್ಯಕ್ರಿಯೆ ಚೆನ್ನೈನ ತಾಮರೈಪಾಕಂನಲ್ಲಿರುವ ಎಸ್​ಪಿಬಿ ಅವರ ತೋಟದಲ್ಲೇ ನೆರವೇರಿತು.

ಶೈವ ಆರಾಧ್ಯ ಸಂಪ್ರದಾಯದಂತೆ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಅಂತ್ಯಕ್ರಿಯೆ ನಡೆಯಿತು. ಅವರ ಮಗ ಎಸ್​ ಪಿ ಚರಣ್​ ಅಂತಿಮ ಸಂಸ್ಕಾರದ ವಿಧಿ ವಿಧಾನಗಳನ್ನು ನೆರವೇರಿದರು.

ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಸಂಸ್ಕಾರ ನಡೆಸಲಾಯಿತು. ಪೊಲೀಸರು ಕುಶಾಲ ತೋಪು ಸಿಡಿಸಿ ಎಸ್​ಪಿಬಿ ಅಂತಿಮ ಗೌರವ ಸಲ್ಲಿಸಲಾಯಿತು. ಎಸ್​ಪಿಬಿ ಅವರ ಅಂತ್ಯಸಂಸ್ಕಾರದಲ್ಲಿ ಕುಟುಂಬಸ್ಥರ ಜೊತೆಗೆ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಭಾಗಿಯಾದ್ದರು.

ತಮ್ಮ ಇಂಪಾದ ಹಾಡುಗಳ ಮೂಲಕ ರಂಜಿಸಿದ್ದ ಸ್ವರ ಸಾಮ್ರಾಟನಿಗೆ ಕಣ್ಣೀರಿನ ಬೀಳ್ಕೊಡುಗೆ ನೀಡಲಾಯಿತು. ನಿನ್ನೆ ಮಧ್ಯಾಹ್ನ 1.04ಕ್ಕೆ ಎಸ್​ ಪಿ ಬಾಲಸುಬ್ರಹ್ಮಣ್ಯಂ ಅವರು ಎಂಜಿಎಂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಈ ವಿಷಯವನ್ನು ಮಗ ಚರಣ್​ ತಿಳಿಸಿದ್ದರು.

ತಿರುವಳ್ಳೂರ್ ಜಿಲ್ಲೆಯ ತಾಮರೈಪಾಕ್ಕಂನ ರೆಡ್ ಹಿಲ್ಸ್ ಬಳಿಯ ಎಸ್ ಪಿ ಬಿ ಅವರ ಪ್ರೀತಿಯ ತೋಟದ ಮನೆಯಲ್ಲಿ ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಹೈದರಾಬಾದ್ ನಿಂದ ಆಗಮಿಸಿದ್ದ ಪುರೋಹಿತರ ತಂಡದ ನೇತೃತ್ವದಲ್ಲಿ ಪುತ್ರ ಎಸ್ ಪಿ ಚರಣ್ ಅವರು ಧಾರ್ಮಿಕ ವಿಧಿವಿಧಾನಗಳನ್ನು ನೆರೆವೇರಿಸಿದರು.

ಧಾರ್ಮಿಕ ವಿಧಿ ವಿಧಾನಕ್ಕೂ ಮೊದಲು ಫಾರ್ಮ್ ಹೌಸ್ ಬಳಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಅಹಿತಕರ ಘಟನೆಗೆ ಅವಕಾಶವಾಗದಂತೆ ಸುಮಾರು 500ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು.

ರಜನಿಕಾಂತ್, ಚಿರಂಜೀವಿ, ಕಮಲ್ ಹಾಸನ್, ಅರ್ಜುನ್ ಸರ್ಜಾ, ನಟ ವಿಜಯ್ ಸೇರಿದಂತೆ ದಕ್ಷಿಣ ಭಾರತದ ಸಿನಿಮಾ ಗಣ್ಯರು ಮತ್ತು ರಾಜಕೀಯ ಗಣ್ಯರು ಎಸ್ ಪಿ ಬಿ ಅಂತಿಮ ವಿಧಿವಿಧಾನದಲ್ಲಿ ಪಾಲ್ಗೊಂಡಿದ್ದರು.

ಕಳೆದ ಒಂದು ತಿಂಗಳಿಂದ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ತೀವ್ರಾ ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಸ್ ಪಿ ಬಾಲಸುಬ್ರಹ್ಮಣ್ಯಂ ಸೆಪ್ಟಂಬರ್ 25ರಂದು ಮಧ್ಯಾಹ್ನ 1.04ಕ್ಕೆ ಕೊನೆಯುಸಿರೆಳೆದರು.

ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆ ಸೇರಿದಂತೆ ಸುಮಾರು 16 ಭಾಷೆಯಲ್ಲಿ 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಎಸ್‌ಪಿಬಿ ಹಾಡಿದ್ದಾರೆ. ಅತಿ ಹೆಚ್ಚು ಹಾಡಿಗೆ ಧ್ವನಿಯಾಗಿದ್ದ ಎಸ್‌ಪಿಬಿ ಅವರು ಗಿನ್ನಿಸ್ ದಾಖಲೆಗೆ ಸಹ ಪಾತ್ರರಾಗಿದ್ದಾರೆ. ತಮ್ಮ ಗಾಯನಕ್ಕಾಗಿ ಆರು ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ. 25 ಬಾರಿ ಆಂಧ್ರ ಪ್ರದೇಶ ಸರ್ಕಾರ ನೀಡುವ ಪ್ರತಿಷ್ಠಿತ ನಂದಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ಕರ್ನಾಟಕ ಹಾಗೂ ತಮಿಳುನಾಡು ರಾಜ್ಯ ಸರ್ಕಾರಗಳು ನೀಡುವ ರಾಜ್ಯ ಪ್ರಶಸ್ತಿಗಳು ಸಹ ಪಡೆದಿದ್ದಾರೆ. ಚಿತ್ರರಂಗದಲ್ಲಿ ಎಸ್‌ಪಿಬಿ ಅವರ ಕೊಡುಗೆಗೆ ಗೌರವಿಸಿ ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿ ಸಹ ಲಭಿಸಿದೆ.

Comments are closed.