
ನವದೆಹಲಿ: ಕರೊನಾ ಪಾಸಿಟಿವ್ ಬಂದು ಆಸ್ಪತ್ರೆಯಿಂದ ಗುಣಮುಖರಾಗಿ ಮನೆಗೆ ಹೋದವರಿಗೆ ಪುನಃ ಅದು ಬಾಧಿಸದಂತೆ ಕೆಲವೊಂದು ಮಾರ್ಗಸೂಚಿಗಳನ್ನು ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದೆ.
ಪಾಸಿಟಿವ್ ಬಂದವರು ಗುಣಮುಖ ಹೊಂದಿದ ನಂತರ ಯಾವ ರೀತಿ ಜೀವನ ಪಾಲನೆ ಮಾಡಬೇಕು ಎಂದು ಕರೊನೋತ್ತರ ನಿರ್ವಹಣೆ ಶಿಷ್ಟಾಚಾರ ಮಾರ್ಗಸೂಚಿ ಇದಾಗಿದೆ.
ಇದರಲ್ಲಿ ಪ್ರಮುಖವಾಗಿ ಉಲ್ಲೇಖಗೊಂಡಿರುವುದು ವಾಕಿಂಗ್, ಯೋಗಾಸನ ಹಾಗೂ ಪ್ರಾಣಾಯಾಮ, ಇದು ಕರೊನೋತ್ತರ ಮಾತ್ರವಲ್ಲದೇ ಆರಂಭದಲ್ಲಿಯೇ ಕರೊನಾ ಸೋಂಕು ಬಾಧಿಸದಂತೆಯೂ ಸಹಕಾರಿಯಾಗಬಲ್ಲುದು.
ಇದನ್ನು ಹೊರತುಪಡಿಸಿದರೆ ಕರೊನೋತ್ತರವಾಗಿ ಏನೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಬಗ್ಗೆ ಆರೋಗ್ಯ ಸಚಿವಾಲಯ ನೀಡಿರುವ ಮಾಹಿತಿ ಇಲ್ಲಿದೆ:
* ಕರೊನಾ ಸೋಂಕು ಗುಣಮುಖವಾಯಿತೆಂದು ಸುಮ್ಮನೆ ಇರಬಾರದು. ಬದಲಿಗೆ ಸೋಂಕು ನೆಗೆಟಿವ್ ಎಂದು ಬಂದ ನಂತರವೂ ಮಾಸ್ಕ್ ಬಳಕೆ ಕಡ್ಡಾಯವಾಗಿದೆ. ಸದಾ ಕೈ, ಮುಖಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು, ಸ್ಯಾನಿಟೈಸರ್ ಬಳಕೆ ಮಾಡುತ್ತಿರಬೇಕು, ಸಾಮಾಜಿಕ ಅಂತರ ಅತ್ಯಗತ್ಯ.
* ಸಾಧ್ಯವಾದಷ್ಟು ಬಿಸಿ ನೀರನ್ನು ಸೇವಿಸಿ.
* ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುವ ನಿಟ್ಟಿನಲ್ಲಿ ಆಯುಷ್ ಇಲಾಖೆಯ ಔಷಧಿಗಳನ್ನು ಸೇವಿಸಿ.
* ಹಂತ ಹಂತವಾಗಿ ವೃತ್ತಿಪರ ಕೆಲಸಗಳನ್ನು ಆರಂಭಿಸಿ. ದೇಹವು ಚೈತನ್ಯದಿಂದ ತುಂಬಿರಲು ಮನೆಗೆಲಸಗಳಲ್ಲಿಯೂ ತೊಡಗಿಸಿಕೊಳ್ಳಿ.
* ಪ್ರತಿದಿನ ಬೆಳಗ್ಗೆ ಮತ್ತು ಸಾಯಂಕಾಲ ನಿಯಮಿತವಾಗಿ ನಡಿಗೆ ಮಾಡುತ್ತಿರಿ. ಉಸಿರಾಟಕ್ಕೆ ಸಂಬಂಧಿಸಿದ ವ್ಯಾಯಾಮ, ಯೋಗ ಮಾಡುತ್ತಿರಿ.
* ಪೌಷ್ಟಿಕಯುಕ್ತ ಆಹಾರ ಸೇವನೆ ಅತ್ಯಗತ್ಯ, ಜತೆಗೆ ಸಾಕಷ್ಟು ನಿದ್ದೆ, ವಿಶ್ರಾಂತಿ ತೆಗೆದುಕೊಳ್ಳಿ.
* ಕರೊನೋತ್ತರ ಅಧಿಕ ಜ್ವರ, ಉಸಿರಾಟ ಸಮಸ್ಯೆ, ಎದೆನೋವು ಬರುತ್ತಿರುತ್ತದೆಯೇ ಎಂದು ನೋಡಿಕೊಳ್ಳಿ.
* ಕರೊನಾದಿಂದ ಗುಣಮುಖರಾದವರು ತಮ್ಮ ಸ್ನೇಹಿತರು, ಕುಟುಂಬ ಸದಸ್ಯರೊಂದಿಗೆ ತಮ್ಮ ಅನುಭವ ಹಂಚಿಕೊಳ್ಳಿ.
* ಕರೊನಾ ಸೋಂಕಿನಿಂದ ಗುಣಮುಖರಾದ ನಂತರ ಅದರ ಪಾಲೋಅಪ್ ಅತ್ಯಗತ್ಯ. ಈ ಹಿನ್ನೆಲೆಯಲ್ಲಿ ಡಿಸ್ಚಾರ್ಜ್ ಆದ 7 ದಿನಗಳೊಳಗೆ ವೈದ್ಯರನ್ನು ಭೇಟಿ ಮಾಡಿ.
* ಕರೊನಾ ಸಮಯದಲ್ಲಿ ಹೋಂ ಐಸೊಲೇಷನ್ನಲ್ಲಿರುವವರು ಹೆಚ್ಚಿನ ಆರೋಗ್ಯ ಸಮಸ್ಯೆ ಕಂಡುಬಂದರೆ ತಕ್ಷಣದ ಹತ್ತಿರದ ಆರೋಗ್ಯ ಕೇಂದ್ರವನ್ನು ಭೇಟಿ ಮಾಡಬೇಕು.
* ತೀವ್ರ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿರುವವರು ಕಠಿಣ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.
Comments are closed.