
ಚೆನ್ನೈ: ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ತಮಿಳುನಾಡು ಪೊಲೀಸರಿಗೆ ಬೇಕಾಗಿದ್ದ ಕುಖ್ಯಾತ ರೌಡಿಶೀಟರ್ ಓರ್ವ ಚೆನ್ನೈನ ವಂಡಲೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾರತೀಯ ಜನತಾ ಪಕ್ಷದ ತಮಿಳುನಾಡು ಘಟಕಕ್ಕೆ ಸೇರಲು ಪ್ರಯತ್ನಿಸಿದ್ದು, ಈ ವೇಳೆ ಸ್ಥಳದಲ್ಲಿ ಪೊಲೀಸರನ್ನು ಕಂಡಕೂಡಲೇ ಅಲ್ಲಿಂದ ಕಾರಿನಲ್ಲಿ ತಪ್ಪಿಸಿಕೊಂಡಿರುವ ಘಟನೆ ನಡೆದಿದೆ.
7 ಕೊಲೆ ದರೋಡೆ ಸೇರಿದಂತೆ ಸುಮಾರು 35ಕ್ಕೂ ಹೆಚ್ಚು ಪ್ರಕರಣಗಳಲ್ಲಿ ತಮಿಳುನಾಡು ಪೊಲೀಸರಿಂದ ಬಹಳ ದಿನಗಳಿಂದ ಹುಡುಕಲಾಗುತ್ತಿರುವ ಕುಖ್ಯಾತ ರೌಡಿ ಶೀಟರ್ ಸೂರ್ಯ. ಆದರೆ, ಈತ ಸೋಮವಾರ ರಾಜ್ಯ ಬಿಜೆಪಿ ಘಟಕದ ಮುಖ್ಯಸ್ಥ ಎಲ್. ಮುರುಗನ್ ನೇತೃತ್ವದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಲು ಹೊರಟಿದ್ದ.
ಈ ಕಾರ್ಯಕ್ರಮದಲ್ಲಿ ರೌಡಿ ಶೀಟರ್ ಸೂರ್ಯ ಪಾಲ್ಗೊಳ್ಳಲಿದ್ದಾನೆ ಎಂಬ ಖಚಿತ ಮಾಹಿತಿ ಪಡೆದ ಚೆಂಗಲ್ಪಟ್ಟು ಜಿಲ್ಲಾ ಪೊಲೀಸರು ಆತನನ್ನು ವಶಕ್ಕೆ ಪಡೆಯುವ ಸಲುವಾಗಿ ಸ್ಥಳಕ್ಕೆ ತೆರಳಿದ್ದಾರೆ. ಆದರೆ, ಪೊಲೀಸರು ಬಂದದ್ದನ್ನು ಕಂಡ ಕೂಡಲೇ ಆತ ಸ್ಥಳದಿಂದ ಕಾರಿನಲ್ಲಿ ಪರಾರಿಯಾಗಿದ್ದಾನೆ. ಹೀಗಾಗಿ ಆತನ ನಾಲ್ಕು ಜನ ಸಹಚರರನ್ನು ವಶಕ್ಕೆ ಪಡೆದಿರುವ ಪೊಲೀಸರು ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಇದೀಗ ಆರೋಪಿ ಸೂರ್ಯ ವಿರುದ್ಧ ಸಿಆರ್‌ಪಿಸಿ ಸೆಕ್ಷನ್ 41ರ ಅಡಿಯಲ್ಲಿ ಮತ್ತೊಂದು ಎಫ್ಐಆರ್ ದಾಖಲಿಸಲಾಗಿದೆ. ಈ ಕುರಿತು ಮಾತನಾಡಿರುವ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಮುರುಗನ್, “ಕುಖ್ಯಾತ ರೌಡಿ ಬಿಜೆಪಿ ಪಕ್ಷಕ್ಕೆ ಸೇರಲು ಮುಂದಾಗಿರುವ ಬಗ್ಗೆ ತನಗೆ ಏನೂ ಗೊತ್ತಿಲ್ಲ” ಎಂದು ತಿಳಿಸಿದ್ದಾರೆ.
ಆದರೆ, ಈ ಕುರಿತು ಟ್ವೀಟ್ ಮಾಡಿರುವ ಪತ್ರಕರ್ತ ಶರವಣನ್, “ವಂಡಲೂರು ಬಳಿ, ಭಾಜಾಪ ನಾಯಕ ಎಲ್.ಮುರುಗನ್ ಅವರ ಮುಂದಾಳತ್ವದಲ್ಲಿ, ಬಿಜೆಪಿ ಸೇರುವುದಕ್ಕೆ ಬಂದಿದ್ದ ಪ್ರಬಲ ರೌಡಿ ನೆರ್ಕುಂಡ್ರಂ ಸೂರ್ಯ(7 ಕೊಲೆ ಸೇರಿದಂತೆ 52 ಪ್ರಕರಣಗಳು) ಪೋಲೀಸರನ್ನು ಕಂಡೊಡನೆ ಪರಾರಿಯಾಗಿದ್ದಾನೆ. ಇತ್ತೀಚೆಗೆ ದಕ್ಷಿಣ ಚೆನ್ನೈನ ಕುಖ್ಯಾತ ದಾದಾ ಕಲ್ವೆಟ್ಟು ರವಿ ಭಾಜಾಪದೊಂದಿಗೆ ಸೇರಿಕೊಂಡಿದ್ದಾನೆ” ಎಂದು ಬರೆದುಕೊಂಡಿದ್ದಾರೆ.
ಈ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ, ಚಾಕು ಇಟ್ಟುಕೊಂಡಿದ್ದ ಇತರೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಅವರಿಗೆ ಸೂರ್ಯನೊಂದಿಗೆ ಸಂಬಂಧವಿದೆಯೇ ಎಂಬುದರ ಕುರಿತು ತನಿಖೆ ನಡೆಯುತ್ತಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಸೂರ್ಯ ವಿರುದ್ಧ ಕೊಲೆ, ಕೊಲೆ ಯತ್ನ ಮತ್ತು ಸ್ಫೋಟಕಗಳ ಬಳಕೆ ಸೇರಿದಂತೆ ಹಲವಾರು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದು, ಆತನ ಪತ್ತೆಗೆ ಈಗಾಗಲೇ ಬಲೆ ಬೀಸಿದ್ದಾರೆ.
ಆದರೆ, 2021ರಲ್ಲಿ ತಮಿಳುನಾಡಿನಲ್ಲಿ ರಾಜ್ಯ ವಿಧಾನ ಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಬಹಳಷ್ಟು ರೌಡಿ ಹಿನ್ನೆಲೆಯ ಜನರನ್ನು ಬಿಜೆಪಿ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದೆ ಎಂಬ ಆರೋಪ ವ್ಯಾಪಕವಾಗಿ ಕೇಳಿಬರುತ್ತಿದೆ. ಬಿಜೆಪಿ ಸೇರಿದರೆ ತಮ್ಮ ಮೇಲಿನ ಪ್ರಕರಣಗಳನ್ನು ಕೈಬಿಡಲಾಗುತ್ತದೆ ಎಂಬ ಆಮಿಷ ಒಡ್ಡಲಾಗುತ್ತಿದೆ ಎಂಬ ವದಂತಿ ಸಹ ಚಾಲ್ತಿಯಲ್ಲಿದೆ ಎನ್ನಲಾಗುತ್ತಿದೆ.
Comments are closed.