ರಾಷ್ಟ್ರೀಯ

ಭಾರತ-ಪಾಕ್ ಅಂತರರಾಷ್ಟ್ರೀಯ ಗಡಿಯ ಬೇಲಿಯ ಕೆಳಭಾಗದಲ್ಲಿ ಸುರಂಗ ಮಾರ್ಗ ಪತ್ತೆ

Pinterest LinkedIn Tumblr


ನವದೆಹಲಿ(ಆ. 29): ಜಮ್ಮುವಿನ ಭಾರತ-ಪಾಕ್ ಅಂತರರಾಷ್ಟ್ರೀಯ ಗಡಿಯ ಬೇಲಿಯ ಕೆಳಭಾಗದಲ್ಲಿ ಸುರಂಗಮಾರ್ಗ ನಿರ್ಮಾಣವಾಗಿರುವುದನ್ನು ಭಾರತದ ಗಡಿ ಭದ್ರತಾ ಪಡೆ (ಬಿಎಸ್​ಎಫ್) ಪತ್ತೆ ಹಚ್ಚಿದೆ. ಜಮ್ಮುವಿನ ಸಾಂಬಾ ಸೆಕ್ಟರ್​ನಲ್ಲಿ ಬಿಎಸ್​ಎಫ್ ಸೈನಿಕರು ಗಡಿಯಲ್ಲಿ ಪಹರೆ ನಡೆಸುವಾಗ ಇದು ಕಂಡುಬಂದಿದೆ. ನೆಲದಿಂದ 25 ಮೀಟರ್ ಆಳದಲ್ಲಿ ಗಡಿಯಿಂದ 50 ಮೀಟರ್​ನೊಳಗೆ ಒಳಗೆ ಈ ಸುರಂಗ ಚಾಚಿದೆ. ಇದು ಬೆಳಕಿಗೆ ಬಂದ ನಂತರ ಬಿಎಸ್​ಎಫ್ ತುಕಡಿಗಳು ಗಡಿಯಾದ್ಯಂತ ಶೋಧ ಕಾರ್ಯಾಚರಣೆ ನಡೆಸಿದೆ. ಪಾಕಿಸ್ತಾನ ಭಾಗದಿಂದ ಭಾರತದೊಳಗೆ ನುಸುಳಲು ಈ ಸುರಂಗ ತೋಡಲಾಗಿರುವುದಕ್ಕೆ ಕೆಲ ಸಾಕ್ಷ್ಯಗಳೂ ಸಿಕ್ಕಿರುವಂತಿದೆ.

ಸುರಂಗದ ತುದಿಯಲ್ಲಿ 8-10 ಪ್ಲಾಸ್ಟಿಕ್ ಸ್ಯಾಂಡ್ ಬ್ಯಾಗ್​ಗಳು ಸಿಕ್ಕಿವೆ. ಆ ಬ್ಯಾಗ್​ನಲ್ಲಿ ಪಾಕಿಸ್ತಾನೀ ಗುರುತುಗಳಿವೆ. ಕರಾಚಿ ಮತ್ತು ಶಕರ್​ಗಡ್ ಎಂಬ ಹೆಸರುಗಳು ಈ ಕವರ್​ಗಳಲ್ಲಿ ಕಾಣಿಸಿವೆ. ಇತ್ತೀಚೆಗಷ್ಟೇ ಈ ಬ್ಯಾಗುಗಳನ್ನ ತಯಾರಿಸುವುದೂ ಅದರ ಮ್ಯಾನುಫ್ಯಾಕ್ಚರಿಂಗ್ ಡೇಟ್​ನಿಂದ ತಿಳಿದುಬಂದಿದೆ.

ಜಮ್ಮು, ಪಂಜಾಬ್, ರಾಜಸ್ಥಾನ ಮತ್ತು ಗುಜರಾತ್ ರಾಜ್ಯಗಳಲ್ಲಿ ಪಾಕಿಸ್ತಾನದ ಜೊತೆ ಒಟ್ಟು ಇರುವ ಗಡಿ ಸುಮಾರು 3,300 ಕಿಮೀ ಇದೆ. ಇಷ್ಟು ಉದ್ದದ ಗಡಿಭಾಗವನ್ನು ಬಿಎಸ್​ಎಫ್ ಕಾವಲು ಕಾಯುತ್ತದೆ. ಬಹಳಷ್ಟು ಎಚ್ಚರಿಕೆಯಿಂದ ಗಡಿಕಾವಲು ಮಾಡಲಾಗುತ್ತಿದೆ. ಇತ್ತೀಚೆಗೆ ಉಗ್ರಗಾಮಿಗಳು ಒಳನುಸುಳಿರುವ ಐದಾರು ಘಟನೆಗಳು ಬೆಳಕಿಗೆ ಬಂದ ಬಳಿಕ ಇನ್ನಷ್ಟು ತೀವ್ರವಾಗಿ ಗಡಿ ಕಾಯಲಾಗುತ್ತದೆ.

ಈಗ ಸುರಂಗ ಮಾರ್ಗ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಇನ್ನಷ್ಟು ಸುರಂಗ ಮಾರ್ಗಳಿವೆಯೇ ಎಂಬುದನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಶೋಧ ಕಾರ್ಯಾಚರಣೆ ನಡೆದಿದೆ. ಸುರಂಗಗಳನ್ನ ಪತ್ತೆಹಚ್ಚಬಲ್ಲ ರಾಡಾರ್​ಗಳ ಬಳಕೆಯಾಗುತ್ತಿದೆ. ಇದೇ ವೇಳೆ, ಜಮ್ಮು, ಪಂಜಾಬ್, ರಾಜಸ್ಥಾನ ಮತ್ತು ಗುಜರಾತ್ ರಾಜ್ಯಗಳಲ್ಲಿ ಹೆಚ್ಚು ಅಲರ್ಟ್ ಘೋಷಿಸಲಾಗಿದೆ.

Comments are closed.