
ಲಕ್ನೋ(ಆ. 29): ಲಾಕ್ ಡೌನ್ ಇದ್ದ ಸಂದರ್ಭದಲ್ಲೇ ಅಜ್ಞಾತ ದುಷ್ಕರ್ಮಿಗಳು ಭಾರತೀಯ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರ ಹೆಂಡತಿ ಮತ್ತು ಮಗನನ್ನು ಗುಂಡಿಟ್ಟು ಹತ್ಯೆಗೈದಿರುವ ದಾರುಣ ಘಟನೆ ಲಕ್ನೋದಲ್ಲಿ ನಡೆದಿದೆ.
ಸಿಎಂ ಯೊಗಿ ಆದಿತ್ಯನಾಥ್ ನಿವಾಸದ ಸಮೀಪವೇ ಈ ಘಟನೆ ನಡೆದಿರುವುದು ಬೆಚ್ಚಿಬೀಳಿಸಿದೆ. ಪ್ರತಿಷ್ಠಿತ ಪ್ರದೇಶವೆಂದು ಪರಿಗಣಿಸಲಾದ ಗೌತಮ್ಪಲ್ಲಿ ಎಂಬಲ್ಲಿನ ರೈಲ್ವೆ ಕಾಲೊನಿಯಲ್ಲಿರುವ ಆರ್.ಡಿ. ವಾಜಪೇಯಿ ಅವರ ಮನೆಯಲ್ಲಿ ಅವರ 49 ವರ್ಷದ ಹೆಂಡತಿ ಹಾಗೂ 20 ವರ್ಷದ ಮಗನ್ನು ಆಗಂತುಕರು ಬಲಿತೆಗೆದುಕೊಂಡಿದ್ಧಾರೆ. ಈ ದುರ್ಘಟನೆ ನಡೆದ ಸಂದರ್ಭದಲ್ಲಿ ಎ.ಡಿ. ವಾಜಪೇಯಿ ಮನೆಯಲ್ಲಿರಲಿಲ್ಲ. ಅವರು ದೆಹಲಿಯಲ್ಲಿ ಕರ್ತವ್ಯದಲ್ಲಿದ್ದಾರೆನ್ನಲಾಗಿದೆ. ಮನೆಯಲ್ಲಿ ಅವರ ಪತ್ನಿ ಮತ್ತು ಮಗನ ಜೊತೆ ಮಗಳೂ ಇದ್ದರೆನ್ನಲಾಗಿದೆ. ಮಗಳಿಗೆ ಯಾವುದೇ ಅಪಾಯವಾದ ವರದಿಯಾಗಿಲ್ಲ.
ಘಟನೆ ಬೆಳಕಿಗೆ ಬಂದ ಕೂಡಲೇ ಲಕ್ನೋ ಪೊಲೀಸ್ ಕಮಿಷನರ್ ಸುಜೀತ್ ಪಾಂಡೆ, ಪೊಲೀಸ್ ಮಹಾನಿರ್ದೇಶಕ ಹೆಚ್.ಸಿ. ಅವಾಸ್ತಿ ಮೊದಲಾದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಶ್ವಾನ ದಳದ ತಂಡವೊಂದು ಕೂಡ ಘಟನಾ ಸ್ಥಳಕ್ಕೆ ದೌಡಾಯಿಸಿದೆ.
“ರೈಲ್ವೆ ಕಾಲೊನಿಯಲ್ಲಿರುವ ಹಿರಿಯ ರೈಲ್ವೆ ಅಧಿಕಅರಿ ಆರ್.ಡಿ. ಬಾಜಪೇಯಿ ಅವರ ಮನೆಯಲ್ಲಿ ಅವರ ಪತ್ನಿ ಮತ್ತು ಮಗನ ಶವ ಪತ್ತೆಯಾಗಿದೆ. ಮೇಲ್ನೋಟಕ್ಕೆ ಇದು ಕಳ್ಳತನದ ಪ್ರಕರಣದಂತೆ ತೋರುತ್ತಿಲ್ಲ. ತನಿಖೆ ನಡೆಸಲಾಗುತ್ತಿದೆ” ಎಂದು ಪೊಲೀಸ್ ಆಯುಕ್ತ ಸುಜೀತ್ ಪಾಂಡೆ ತಿಳಿಸಿದ್ದಾರೆ.
ಹತ್ಯೆ ನಡೆದಾಗ ಮನೆಯಲ್ಲಿ ಬಾಜಪೇಯಿ ಅವರ ಮಗಳೂ ಇದ್ದರೆನ್ನಲಾಗಿದೆ. ಈಕೆ ತಮ್ಮ ಮನೆಗೆಲಸದವರಿಗೆ ಹತ್ಯೆಯ ವಿಚಾರ ತಿಳಿಸಿದ್ದಾರೆ. ಬಳಿಕ ಮನೆಗೆಲಸದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಘಟನೆಯ ಸಂಬಂಧ ವರದಿ ಕಳುಹಿಸಲು ಸೂಚಿಸಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಅಪ್ಪಣೆ ಮಾಡಿದ್ದಾರೆ.
ಉತ್ತರ ಪ್ರದೇಶದ ವಿರೋಧ ಪಕ್ಷಗಳ ನಾಯಕರು ಈ ಘಟನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ಧಾರೆ. ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ ಎಂದು ಕಾಂಗ್ರೆಸ್ ನಾಯಕ ಅಖಿಲೇಶ್ ಪ್ರತಾಪ್ ಸಿಂಗ್ ಆರೋಪಿಸಿದ್ಧಾರೆ. “ಲಕ್ನೋದಲ್ಲಿ ಅತ್ಯಂತ ಸುರಕ್ಷಿತವೆನ್ನಲಾದ ಪ್ರದೇಶದಲ್ಲೇ ಈ ಘಟನೆ ನಡೆದಿದೆ. ಮುಖ್ಯಮಂತ್ರಿಯ ಮನೆ ಕೂಡ ಸಮೀಪವೇ ಇದೆ. ಎಲ್ಲಾ ರಸ್ತೆಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. ಆದರೂ ಇಂಥ ಘಟನೆಗಳು ನಡೆಯುತ್ತಿವೆ. ಈ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ರಾಜ್ಯದಲ್ಲಿ ಅಪರಾಧದ ರೇಖೆ ಏರುತ್ತಿದೆ” ಎಂದು ಕಾಂಗ್ರೆಸ್ ನಾಯಕ ಕೆಂಡಾಮಂಡಲಗೊಂಡಿದ್ಧಾರೆ.
ಸಮಾಜವಾದಿ ಪಕ್ಷದ ಶಾಸಕ ಸುನೀಲ್ ಸಿಂಗ್ ಸಾಜನ್, “ಬಿಗಿಯಾದ ಲಾಕ್ಡೌನ್ ನಿಯಮ ಇದ್ದಾಗ್ಯೂ ಹಿರಿಯ ಅಧಿಕಾರಿಯ ಹೆಂಡತಿ ಮತ್ತು ಮಗನನ್ನು ಶೂಟ್ ಮಾಡುವ ಧೈರ್ಯ ತೋರುತ್ತಾರೆಂದರೆ ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎಂಬುದನ್ನು ತೋರಿಸುತ್ತದೆ. ರಾಜ್ಯದ ಜನರು ಭಯದಲ್ಲಿ ಬದುಕುತ್ತಿದ್ದಾರೆ. ಕ್ರಿಮಿನಲ್ಗಳು ಮುಕ್ತವಾಗಿದ್ದಾರೆ” ಎಂದಿದ್ದಾರೆ.
Comments are closed.