ರಾಷ್ಟ್ರೀಯ

ಪ್ರಾಚೀನ-ಸಾಂಪ್ರದಾಯಿಕ ನಿರ್ಮಾಣ ತಂತ್ರಗಳನ್ನು ಅನುಸರಿಸಿ ಅಯೋಧ್ಯೆ ರಾಮ ಮಂದಿರ ನಿರ್ಮಾಣ; ಭೂಕಂಪ, ಬಿರುಗಾಳಿಗೂ ಜಗ್ಗದಂತೆ ನಿರ್ಮಾಣ

Pinterest LinkedIn Tumblr

ಹೊಸದಿಲ್ಲಿ: ಬಹುನಿರೀಕ್ಷಿತ ರಾಮ ಮಂದಿರ ನಿರ್ಮಾಣ ಕಾರ್ಯ ಅಧಿಕೃತವಾಗಿ ಗುರುವಾರ ಆರಂಭವಾಗಿದೆ. ಇಂಜಿನಿಯರ್‌ಗಳು ಮಂದಿರ ನಿರ್ಮಾಣ ಸ್ಥಳದ ಮಣ್ಣಿನ ಪರೀಕ್ಷೆ ಮಾಡುತ್ತಿದ್ದಾರೆ ಎಂದು ರಾಮ ಮಂದಿರ ಜನ್ಮಭೂಮಿ ಟ್ರಸ್ಟ್‌ ಹೇಳಿದೆ. ಆಗಸ್ಟ್‌ 5ರಂದು ಪ್ರಧಾನಿ ನರೇಂದ್ರ ಮೋದಿ ಭವ್ಯ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು.

ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಹೊಣೆ ಹೊತ್ತಿರುವ ರಾಮ ಮಂದಿರ ಜನ್ಮಭೂಮಿ ಟ್ರಸ್ಟ್ ಗುರುವಾರ ನವದೆಹಲಿಯಲ್ಲಿ ಸಭೆ ಮಂದಿರ ನಿರ್ಮಾಣ ಪ್ರಕ್ರಿಯೆಗಳ ಬಗ್ಗೆ ಚರ್ಚಿಸಿತು. ಸಭೆಯ ನಂತರ ಭಾರತದ ಪ್ರಾಚೀನ ಮತ್ತು ಸಾಂಪ್ರದಾಯಿಕ ನಿರ್ಮಾಣ ತಂತ್ರಗಳನ್ನು ಅನುಸರಿಸಿ ದೇಗುಲ ನಿರ್ಮಿಸಲಾಗುವುದು ಎಂದು ಟ್ರಸ್ಟ್‌ ತಿಳಿಸಿದೆ.

ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭವಾಗಿದ್ದು, ಸಿಬಿಆರ್‌ಐ ರೂರ್ಕಿ, ಐಐಟಿ ಮದ್ರಾಸ್‌ ಹಾಗೂ ಎಲ್‌ ಆಂಡ್‌ ಟಿ ಕಂಪನಿಯ ಇಂಜಿನಿಯರ್‌ಗಳು ಮಂದಿರ ನಿರ್ಮಾಣ ಸ್ಥಳದ ಮಣ್ಣನ್ನು ಪರೀಕ್ಷಿಸುತ್ತಿದ್ದಾರೆ. ದೇಗುಲದ ನಿರ್ಮಾಣ ಕಾರ್ಯ 36 ರಿಂದ 40 ತಿಂಗಳಲ್ಲಿ ಮುಗಿಯುವ ನಿರೀಕ್ಷೆಯಿದೆ ಎಂದು ಟ್ರಸ್ಟ್ ಟ್ವೀಟ್ ಮಾಡಿದೆ. ಜೊತೆಗೆ ಮಂದಿರ ನಿರ್ಮಾಣದಲ್ಲಿ ಕಬ್ಬಿಣ ಬಳಸುವುದಿಲ್ಲ ಎಂದು ಟ್ರಸ್ಟ್‌ ತಿಳಿಸಿದೆ.

ಭಾರತದ ಪ್ರಾಚೀನ ಮತ್ತು ಸಾಂಪ್ರದಾಯಿಕ ನಿರ್ಮಾಣ ತಂತ್ರಗಳನ್ನು ಅನುಸರಿಸಿ ಮಂದಿರ ನಿರ್ಮಿಸಲಾಗುವುದು. ಭೂಕಂಪ, ಬಿರುಗಾಳಿ ಸೇರಿ ಇತರ ನೈಸರ್ಗಿಕ ವಿಪತ್ತುಗಳಿಂದ ದೇವಸ್ಥಾನಕ್ಕೆ ಯಾವುದೇ ತೊಂದರೆಯಾಗದಂತೆ ನಿರ್ಮಾಣ ಮಾಡಲಾಗುವುದು ಎಂದಿರುವ ಟ್ರಸ್ಟ್ ನಿರ್ಮಾಣ ಹಂತದಲ್ಲಿ ಕಬ್ಬಿಣ ಬಳಸುವುದಿಲ್ಲ ಎಂದು ಪುನರುಚ್ಚರಿಸಿದೆ.

ಇನ್ನು, ಮಂದಿರ ನಿರ್ಮಾಣಕ್ಕೆ ತಾಮ್ರದ ಫಲಕಗಳನ್ನು ದಾನ ಮಾಡುವಂತೆ ರಾಮ ಭಕ್ತರಿಗೆ ಟ್ರಸ್ಟ್‌ ಕರೆ ನೀಡಿದೆ. “ಭಕ್ತರು ದಾನ ಮಾಡಿದ ತಾಮ್ರದ ಫಲಕಗಳನ್ನು ಪರಸ್ಪರ ಕಲ್ಲಿನ ಬ್ಲಾಕ್‌ಗಳನ್ನು ಬೆಸೆಯಲು ಬಳಸಲಾಗುತ್ತದೆ. ಫಲಕಗಳು 18 ಇಂಚು ಉದ್ದ, 30 ಮಿಮೀ ಅಗಲ ಮತ್ತು 3 ಮಿಮೀ ಆಳ ಹೊಂದಿರಬೇಕು. ಸುಮಾರು 10,000 ತಾಮ್ರ ಫಲಕಗಳ ಅವಶ್ಯಕತೆ ಇದೆ ಎಂದು ರಾಮ ಮಂದಿರ ಜನ್ಮಭೂಮಿ ಟ್ರಸ್ಟ್‌ ತಿಳಿಸಿದೆ.

Comments are closed.