
ರಾಮ ಮಂದಿರ ಚಳವಳಿಯ ಮುಂಚೂಣಿ ನೇತಾರರಲ್ಲಿ ಪ್ರಮುಖರಾಗಿದ್ದವರು ಆಡ್ವಾಣಿ. ಕೊರೊನಾ ಕಾರಣದಿಂದಾಗಿ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ಪವಿತ್ರ ಘಳಿಗೆಯನ್ನು ಸಾಕ್ಷೀಕರಿಸಲಿದ್ದಾರೆ. ಮಂದಿರ ಮುಹೂರ್ತದ ಮುನ್ನಾ ದಿನ ಮಾತಾಡಿದ ಅವರು, ”ಮಂದಿರ ನಿರ್ಮಾಣ ಭಾರತೀಯರೆಲ್ಲರ ಬಹುದೊಡ್ಡ ಕನಸು. ಈಗ ಆ ಘಳಿಗೆ ಕೂಡಿ ಬಂದಿದ್ದು, ಎಲ್ಲರಿಗೂ ಖುಷಿಯಾಗಿದೆ. ರಾಮ ಮಂದಿರ ಚಳವಳಿ ಸಂದರ್ಭ ನಾನು ನಾಯಕತ್ವ ವಹಿಸಿದ್ದೆ. ಅಂತಹದ್ದೊಂದು ಗುರುತರ ಜವಾಬ್ದಾರಿ ಹೆಗಲೇರಲು ದೈವೇಚ್ಛೆಯೇ ಕಾರಣ,” ಎಂದು ಭಾವುಕರಾಗಿ ನುಡಿದರು.
”1990ರಲ್ಲಿ ಸೋಮನಾಥದಿಂದ ಅಯೋಧ್ಯೆವರೆಗೆ ರಥಯಾತ್ರೆ ಮುನ್ನಡೆಸಿದ್ದೆ. ಭಗವಂತನ ಅನುಗ್ರಹದಿಂದಲೇ ಆ ಕರ್ತವ್ಯವನ್ನು ಸಮರ್ಥವಾಗಿ ನಿಭಾಹಿಸಲು ಸಾಧ್ಯವಾಯಿತು. ಅಂದಿನ ಆ ಯಾತ್ರೆ ಭಕ್ತಿಯ ಸಾಗರವನ್ನೇ ಹೊರ ಹೊಮ್ಮಿಸಿತ್ತು. ಜನರಲ್ಲಿನ ಭಾವ ತೀವ್ರತೆ ಹೆಚ್ಚಳಕ್ಕೆ ಅದು ನೆರವಾಯಿತು. ಈಗ ಪ್ರಧಾನಿ ನರೇಂದ್ರ ಮೋದಿ ಅವರು ಭವ್ಯ ಮಂದಿರಕ್ಕೆ ಅಡಿಗಲ್ಲು ಹಾಕುತ್ತಿದ್ದಾರೆ. ಇದು ಐತಿಹಾಸಿಕ ಅಷ್ಟೇ ಅಲ್ಲ, ಭಾರತೀಯರ ಪಾಲಿಗೆ ಭಾವೋದ್ವೇಗದ ಅಮೃತ ಘಳಿಗೆಯೂ ಹೌದು,” ಎಂದು ಹೇಳಿದರು
ಅಯೋಧ್ಯೆಯಲ್ಲಿ ರಾಮನ ಭವ್ಯ ಮಂದಿರ ನಿರ್ಮಾಣಗೊಳ್ಳಬೇಕು ಎನ್ನುವುದು ಬಿಜೆಪಿಯ ಬಹುದಿನಗಳ ಕನಸಾಗಿತ್ತು. ಅದು ಕೂಡ ಈಗ ಸಾಕಾರಗೊಳ್ಳುತ್ತಿದೆ. ಇದಕ್ಕಾಗಿ ಶ್ರಮಿಸಿದ ವಿಶ್ವ ಮತ್ತು ಭಾರತದ ಅಸಂಖ್ಯಾತ ಜನರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಅವರು ಅಂದು ನೀಡಿದ ಅಮೂಲ್ಯ ನೆರವಿನಿಂದಲೇ ಇವತ್ತು ಈ ಸುವರ್ಣ ಘಳಿಗೆ ಸಾಕಾರಗೊಂಡಿದೆ. 2019ರಲ್ಲಿ ವಿವಾದ ಅಂತ್ಯಗೊಳಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿತು. ಅದರಿಂದ ಶತಮಾನದ ಈರ್ಷ್ಯೆ ನಿವಾರಣೆಯಾಗಿ ಸೌಹಾರ್ದದ ವಾತಾವರಣ ನಿರ್ಮಾಣಗೊಂಡಿದೆ,” ಎಂದು 92 ವರ್ಷದ ಆಡ್ವಾಣಿ ಹಳೆಯ ನೆನಪುಗಳನ್ನು ಬಿಚ್ಚಿಟ್ಟರು.
“ಮೂರು ವರ್ಷದಲ್ಲಿ ಮೂಲ ಯೋಜನೆಗಿಂತಲೂ ಭವ್ಯ ರಾಮ ಮಂದಿರ ನಿರ್ಮಾಣ”: ವಾಸ್ತು ಶಿಲ್ಪಿ
”ಸಹನೆ ಮತ್ತು ತ್ಯಾಗ ಮೂರ್ತಿ ರಾಮ ಭಾರತೀಯ ಆರಾಧ್ಯ ದೈವ. ಆತನ ಮಂದಿರ ಈಗ ಎಲ್ಲಾ ಭಾರತೀಯರಿಗೆ ಸದ್ಗುಣಗಳನ್ನು ಪ್ರಚೋದಿಸಲು ನೆರವಾಗಬಲ್ಲದು ಎಂದು ನಾನು ನಂಬಿದ್ದೇನೆ. ಯಾರನ್ನೂ ಹೊರಗಿಡದೇ ಎಲ್ಲರಿಗೂ ನ್ಯಾಯ ಕಲ್ಪಿಸುವ ಶಾಂತ, ಸಮೃದ್ಧ ಮತ್ತು ಸೌಹಾರ್ದ ಭಾರತ ರಾಮ ರಾಜ್ಯದ ಕಲ್ಪನೆಯಾಗಿದೆ. ಇದು ಮುಂದಿನ ದಿನಗಳಲ್ಲಿ ಸಾಕಾರಗೊಳ್ಳುತ್ತದೆ,” ಎಂದು ಆಡ್ವಾಣಿ ಹೇಳಿದರು.
Comments are closed.