ರಾಷ್ಟ್ರೀಯ

ಬಿಜೆಪಿಗೆ ಹೊಸ ದಾಖಲೆ ಸೃಷ್ಟಿಸಿದ್ದ ಉತ್ತರ ಪ್ರದೇಶದ ಸಚಿವೆ ಕೊರೋನಾದಿಂದ ಸಾವು

Pinterest LinkedIn Tumblr


ಲಕ್ನೋ(ಆ. 02): ಕೊರೋನಾ ವೈರಸ್ ಮಹಾಮಾರಿಯು ಉತ್ತರ ಪ್ರದೇಶದ ಸಚಿವರೊಬ್ಬರನ್ನು ಬಲಿಪಡೆದಿದೆ. ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರದ ತಾಂತ್ರಿಕ ಶಿಕ್ಷಣ ಸಚಿವೆ ಕಮಲ್ ರಾಣಿ ವರುಣ್ ಇಂದು ಭಾನುವಾರ ನಿಧನರಾಗಿದ್ದಾರೆ. ಜುಲೈ 18ರಂದು ಕಮಲ್ ರಾಣಿ ಅವರಿಗೆ ಕೋವಿಡ್-19 ಪಾಸಿಟಿವ್ ಬಂದು ಇಲ್ಲಿಯ ಎಸ್​ಜಿಪಿಜಿಐ ಆಸ್ಪತ್ರೆಗೆ ದಾಖಲಾಗಿದ್ದರು.

ಸಮಾಜಶಾಸ್ತ್ರದಲ್ಲಿ ಸ್ನಾತಕೊತ್ತರ ಪದವಿ ಪಡೆದಿದ್ದ 62 ವರ್ಷದ ಕಮಲ್ ರಾಣಿ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದರು. ಕಾನಪುರ್​ನ ಘಾತಂಪುರ್ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಮೊದಲ ಬಿಜೆಪಿ ಅಭ್ಯರ್ಥಿ ಅವರಾಗಿದ್ದರು.

ಆರೆಸ್ಸೆಸ್ ಕಾರ್ಯಕರ್ತರೊಬ್ಬರ ಪತ್ನಿಯಾದ ಕಮಲರಾಣಿ ಅವರು 1989ರಲ್ಲೇ ಕಾನಪುರ ಮಹಾಪಾಲಿಕೆಯ ಸದಸ್ಯೆಯಾಗಿ ಚುನಾಯಿತರಾಗಿ ರಾಜಕಾರಣಕ್ಕೆ ಅಡಿ ಇಟ್ಟಿದ್ದರು. ಅದೇ ದ್ವಾರಕಾಪುರಿ ವಾರ್ಡ್​ನಿಂದ 1995ರಲ್ಲಿ ಮರು ಆಯ್ಕೆಯಾದರು. ಅದಾಗಿ ಮರುವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಘಾತಂಪುರ್ ಕ್ಷೇತ್ರದಲ್ಲಿ ಪಕ್ಷದ ಟಿಕೆಟ್ ಸಿಕ್ಕಿತು. ನಿರೀಕ್ಷಿತ ಗೆಲುವು ಸಾಧಿಸಿ ಅಚ್ಚರಿ ಮೂಡಿಸಿದರು. ನಂತರದ ಚುನಾವಣೆಯಲ್ಲೂ ಗೆದ್ದು ಸತತ ಆಯ್ಕೆಯಾದರು. ಆದರೆ, 1999ರ ಚುನಾವಣೆಯಲ್ಲಿ ಬಿಎಸ್​ಪಿ ಅಭ್ಯರ್ಥಿ ಎದುರು ಕೇವಲ 585 ಮತಗಳ ಅಂತರದಿಂದ ಸೋಲಪ್ಪಿದರು.

2012ರಲ್ಲಿ ರೌಸುಲಾಬಾದ್ ಕ್ಷೇತ್ರದಿಂದ ಕಮಲ್ ರಾಣಿ ಸೋಲಪ್ಪಿದರು. 2015ರಲ್ಲಿ ಅವರ ಪತಿ ನಿಧನರಾದ ಬಳಿಕ 2017ರಲ್ಲಿ ಘಾತಂಪುರ್ ಕ್ಷೇತ್ರದ ಮೂಲಕವೇ ವಿಧಾನಸಭೆಗೆ ಪ್ರವೇಶ ಮಾಡಿದರು.

ಇದೇ ವೇಳೆ, ಕೋವಿಡ್ ಮಹಾಮಾರಿಯಿಂದ ಬಲಿಯಾದ ಉತ್ತರ ಪ್ರದೇಶದ ಮೊದಲ ಸಚಿವೆ ಇವರಾಗಿದ್ದಾರೆ. ಉತ್ತರ ಪ್ರದೇಶದಲ್ಲಿ ಈವರೆಗೆ ದಾಖಲಾದ ಪ್ರಕರಣಗಳ ಸಂಖ್ಯೆ 90 ಸಾವಿರ ಗಡಿ ಸಮೀಪಿಸಿದೆ. 1,600ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಕೊರೊನಾದಿಂದ ಅತಿಹೆಚ್ಚು ಬಾಧಿತವಾದ ರಾಜ್ಯಗಳಲ್ಲಿ ಉತ್ತರ ಪ್ರದೇಶವೂ ಒಂದಾಗಿದೆ. ಕೊರೋನಾ ಮಹಾಮಾರಿಯನ್ನು ನಿಗ್ರಹಿಸಲು ಯೋಗಿ ಆದಿತ್ಯನಾಥ್ ಸರ್ಕಾರ ಆಗಸ್ಟ್ 5ರಿಂದ ಸೆರೊಲಾಜಿಕಲ್ ಸರ್ವೆ ನಡೆಸಲು ಅಣಿಯಾಗಿದೆ.

Comments are closed.