ರಾಷ್ಟ್ರೀಯ

ಮರಣೋತ್ತರ ಪರೀಕ್ಷೆಗೆ ಲಂಚ ಕೇಳಿದ ಸರ್ಕಾರಿ ವೈದ್ಯ; ಶವಕ್ಕೆ ಅರ್ಧ ಹೊಲಿಗೆ ಹಾಕಿ ಕೊಟ್ಟ ಸಿಬ್ಬಂದಿ

Pinterest LinkedIn Tumblr


ಮೇರಠ್​: ಆತ್ಮಹತ್ಯೆ ಮಾಡಿಕೊಂಡ ಬಾಲಕನ ಮೃತದೇಹದ ಪೋಸ್ಟ್ ಮಾರ್ಟಮ್​ಗೆ ಈ ಸರ್ಕಾರಿ ವೈದ್ಯ ಬೇಡಿಕೆಯಿಟ್ಟ ಲಂಚದ ಮೊತ್ತ ಕೇಳಿದರೆ ಅಬ್ಬಬ್ಬಾ ಇಷ್ಟು ಭ್ರಷ್ಟತನವಾ ಎನ್ನಿಸದೆ ಇರದು..!

ಉತ್ತರ ಪ್ರದೇಶದ ಬಾಗ್​ಪಾತ್​​ ಜಿಲ್ಲೆಯ ನಿರ್ಪುರಾ ಗ್ರಾಮದ 16ವರ್ಷದ ಬಾಲಕನೋರ್ವ ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದ. ಅವನ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದಾಗ ಅಲ್ಲಿನ ವೈದ್ಯ ಪೋಸ್ಟ್​ಮಾರ್ಟಮ್​ ಮಾಡಬೇಕೆಂದರೆ 8700 ರೂ.ಕೊಡಬೇಕು ಎಂದು ಹೇಳಿದ. ಹಾಗೇ ಪೋಸ್ಟ್ ಮಾರ್ಟಮ್​ ಮುಗಿದ ಬಳಿಕ ಆ ದೇಹಕ್ಕೆ ಸರಿಯಾಗಿ ಹೊಲಿಗೆ ಹಾಕಿ, ಶವವನ್ನು ಸುತ್ತಿ, ಕುಟುಂಬದವರಿಗೆ ಹಸ್ತಾಂತರ ಮಾಡುವುದು ವೈದ್ಯಕೀಯ ಸಿಬ್ಬಂದಿಯ ಕೆಲಸ. ಆದರೆ ಇಲ್ಲಿನ ಸಿಬ್ಬಂದಿ ಅದಕ್ಕಾಗಿ ಬಾಲಕನ ತಂದೆಯ ಬಳಿ ಮತ್ತೆ 800 ರೂ.ಕೇಳಿದ್ದಾರೆ.

ಮೃತ ಬಾಲಕನ ತಂದೆ ಸೋಮ್​ ದತ್ತಾ ಶರ್ಮಾ ಸದ್ಯ ನಿರುದ್ಯೋಗಿ. ಲಾಕ್​ಡೌನ್​ನಿಂದ ಕೆಲಸ ಕಳೆದುಕೊಂಡವರು. ಕೈಯಲ್ಲಿದ್ದ ಹಣವೂ ಖಾಲಿಯಾಗಿತ್ತು. ವೈದ್ಯ ಅಷ್ಟೊಂದು ದೊಡ್ಡ ಮೊತ್ತದ ಲಂಚ ಕೇಳಿದಾಗ ನೆರೆಹೊರೆಯವರೆಲ್ಲ ಅವರ ಸಹಾಯಕ್ಕೆ ನಿಂತರು. ಸುಮಾರು 5,500 ರೂ.ಸಂಗ್ರಹವಾಗಿತ್ತು. ಅದನ್ನೇ ವೈದ್ಯರಿಗೆ ಕೊಟ್ಟು ಹೇಗೋ ಪೋಸ್ಟ್​ ಮಾರ್ಟಮ್​ ಮುಗಿಯಿತು. ಇದನ್ನೂ ಓದಿ: 5 ಕೇಂದ್ರಗಳಲ್ಲಿ ಸಿಇಟಿ, ಕರೊನಾ ಇದ್ದವರಿಗೆ ಪ್ರತ್ಯೇಕ ಕೊಠಡಿ

ಆದರೆ ನಂತರ ಶವ ಹಸ್ತಾಂತರ ಮಾಡಲು ಸಿಬ್ಬಂದಿ ಹಣ ಕೇಳಿದಾಗ ಪಾಲಕರು ತಮ್ಮ ಬಳಿ ದುಡ್ಡು ಇಲ್ಲ ಎಂದು ಹೇಳಿದರು. ಇದರಿಂದಾಗಿ ವೈದ್ಯಕೀಯ ಸಿಬ್ಬಂದಿ ಮೃತದೇಹಕ್ಕೆ ಅರ್ಧಂಬರ್ಧ ಹೊಲಿಗೆ ಹಾಕಿ ವಾಪಸ್​ ಕೊಟ್ಟಿದ್ದಾರೆ. ಇದನ್ನೆಲ್ಲ ನೋಡಿದ ಆ ಗ್ರಾಮ ಮುಖ್ಯಸ್ಥನ ಪುತ್ರ ನಿಶ್ಚಯ್ ರಾಣಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರನ್ನು ಟ್ವಿಟರ್​ನಲ್ಲಿ ಟ್ಯಾಗ್​ ಮಾಡಿ ದೂರು ನಿಡಿದ್ದಾರೆ. ದಯವಿಟ್ಟು ಲಂಚಕೋರ ವೈದ್ಯರನ್ನು ವಿಚಾರಣೆಗೆ ಒಳಪಡಿಸಿ ಎಂದು ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲ, ಪ್ರಧಾನಮಂತ್ರಿ ಕಚೇರಿಯನ್ನೂ ಟ್ಯಾಗ್​ ಮಾಡಿದ್ದಾರೆ.

ಈ ಟ್ವೀಟ್​ ಬಾಗ್​ಪತ್​ ಜಿಲ್ಲೆಯ ಮುಖ್ಯ ವೈದ್ಯಕೀಯ ಅಧಿಕಾರಿ ರಾಜ್​ ಕಿಶೋರ್​ ಟಂಡನ್​ ಅವರ ಗಮನಕ್ಕೆ ಬಂದಿದ್ದು, ಅವರು ಆರೋಪಿ ವೈದ್ಯರು ಮತ್ತು ಅವರ ಇಬ್ಬರು ಸಹಾಯಕರಿಂದ ವರದಿ ಕೇಳಿದ್ದಾರೆ.

Comments are closed.