ರಾಷ್ಟ್ರೀಯ

ವಿಶ್ವದ ಒಟ್ಟು ಹುಲಿಗಳ ಪೈಕಿ 70% ಭಾರತದಲ್ಲಿದೆ

Pinterest LinkedIn Tumblr

ನವದೆಹಲಿ: ಹುಲಿ ಮೀಸಲು (ಟೈಗರ್ ರಿಸರ್ಬೇಷನ್) ಗಾಗಿ ನಾಯಕತ್ವ ವಹಿಸಲು ಮತ್ತು ಈ ಕ್ಷೇತ್ರದಲ್ಲಿ ಇತರೆ ರಾಷ್ಟ್ರಗಳೊಂದಿಗೆ ಕೆಲಸ ಮಾಡಲು ಭಾರತ ಸಿದ್ಧವಾಗಿದೆ ಎಂದು ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಮಂಗಳವಾರ ಹೇಳಿದ್ದಾರೆ.

ಜಾಗತಿಕ ಹುಲಿ ದಿನಾಚರಣೆಯ ಮುನ್ನಾದಿನದಂದು ಮಾತನಾಡಿದ ಸಚಿವರು, ಭಾರತವು ತನ್ನ ಸಾಧನೆಗಳ ಬಗ್ಗೆ ಹೆಮ್ಮೆಪಡುತ್ತದೆ ಮತ್ತು ಭೂಮಿ ಮತ್ತು ಮಳೆಯ ಕೊರತೆಯ ಹೊರತಾಗಿಯೂ ಭಾರತ ವಿಶ್ವದ ಜೀವವೈವಿಧ್ಯತೆಯ ಶೇಕಡಾ ಎಂಟು ಭಾಗವನ್ನು ತನ್ನಲ್ಲಿರಿಸಿಕೊಂಡಿದೆ ಎಂದಿದ್ದಾರೆ.

ವಿಶ್ವದ ಒಟ್ಟು ಹುಲಿಗಳ ಪೈಕಿ 70% ಭಾರತದಲ್ಲಿದೆ. ಭಾರತ ಅದರ ಬಗ್ಗೆ ಹೆಮ್ಮೆ ಪಡಲಿದೆ. ನಮ್ಮಲ್ಲಿ 30,000 ಆನೆಗಳು, 3000 ಏಕಕೊಂಬಿನ ಖಡ್ಗಮೃಗಗಳು ಮತ್ತು 500 ಕ್ಕೂ ಹೆಚ್ಚು ಸಿಂಹಗಳಿವೆ.

“1973 ರಲ್ಲಿ, ಕೇವಲ ಒಂಬತ್ತು ಹುಲಿ ಅಭಯಾರಣ್ಯಗಳಿದ್ದವು. ಈಗ 50 ಕ್ಕೆ ಏರಿದೆ. ಈ ಯಾವುದೇ ಮೀಸಲು ಅರಣ್ಯವೂ ಕಳಪೆಯಾಗಿಲ್ಲ ಎನ್ನುವುದು ಅತಿಮುಖ್ಯ ಅಂಶ. ಜಾಗತಿಕ ಭೂಪ್ರದೇಶದ ಶೇಕಡಾ 2.5ರಷ್ಟು ಭೂಮಿ, ನಾಲ್ಕು ಶೇಕಡಾ ಮಳೆ ಮತ್ತು ವಿಶ್ವದ ಮಾನವ ಜನಸಂಖ್ಯೆಯ ಶೇಕಡಾ 16ರಷ್ಟನ್ನು ಹೊಂದಿರುವ ಬಾರತ ವಿಶ್ವದ ಹುಲಿಗಳ ಪೈಕಿ 70 ಪ್ರತಿಶತವನ್ನು ಒಳಗೊಂಡಿದೆ. ” ಎಂದು ಅವರು ಹೇಳಿದರು ಹುಲಿಗಳ ರಕ್ಷಣೆಗಾಗಿ ಭಾರತ ಇತರ ರಾಷ್ಟ್ರಗಳೊಂದಿಗೆ ಕೆಲಸ ಮಾಡಲು ಸಿದ್ಧವಾಗಿದೆ ಎಂದು ಅವರು ಹೇಳಿದರು.

“ನಾಯಕತ್ವ ವಹಿಸಲು ಮತ್ತು ಎಲ್ಲಾ 12 ಹುಲಿ ಸಂರಕ್ಷಣೆ ಉದ್ದೇಶವುಳ್ಳ ದೇಶಗಳೊಂದಿಗೆ ಅವರ ತರಬೇತಿ, ಸಾಮರ್ಥ್ಯ ವೃದ್ಧಿ ಮತ್ತು ಹುಲಿ ಸಂರಕ್ಷಿತ ತಾಣಗಳ ನೈಜ ನಿರ್ವಹಣೆಯಲ್ಲಿ ಕೆಲಸ ಮಾಡಲು ನಾವು ಸಿದ್ಧರಿದ್ದೇವೆ” ಎಂದು ಜಾವಡೇಕರ್ ಹೇಳಿದರು. ಭಾರತ, ಬಾಂಗ್ಲಾದೇಶ, ಭೂತಾನ್, ಕಾಂಬೋಡಿಯಾ, ಚೀನಾ, ಇಂಡೋನೇಷ್ಯಾ, ಲಾವೊ ಪಿಡಿಆರ್, ಮಲೇಷ್ಯಾ, ಮ್ಯಾನ್ಮಾರ್, ನೇಪಾಳ, ರಷ್ಯಾ, ಥೈಲ್ಯಾಂಡ್ ಮತ್ತು ವಿಯೆಟ್ನಾಂ- ಪ್ರಸ್ತುತ 13 ಹ್ಲಿ ಸಂರಕ್ಷಣೆ ಹೊಣೆ ಹೊತ್ತ ರಾಷ್ಟ್ರಗಳಾಗಿದೆ. ಈ ಸಂದರ್ಭದಲ್ಲಿ, ಎಲ್ಲಾ 50 ಹುಲಿಸಂರಕ್ಷಣಾ ವಲಯಗಳ ಸ್ಥಿತಿ ವರದಿ ಬಿಡುಗಡೆ ಮಾಡಲಾಗಿದೆ.

ವರದಿಯ ಪ್ರಕಾರ, ಮಧ್ಯಪ್ರದೇಶದಲ್ಲಿ ಗರಿಷ್ಠ ಸಂಖ್ಯೆಯ ಹುಲಿಗಳಿವೆ, ನಂತರದ ಸ್ಥಾನ ಕರ್ನಾಟಕದ್ದಾಗಿದೆ.

2019 ರಲ್ಲಿ ಹುಲಿ ಗಣತಿ ವರದಿಯನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದ್ದು ಅದರ ಪ್ರಕಾರ ಭಾರತವು 2,967 ಹುಲಿಗಳನ್ನು ಹೊಂದಿದೆ. ಈ ಸಂಖ್ಯೆ 2006 ರ ಅಂಕಿ ಸಂಖ್ಯೆಗೆ ಹೋಲಿಸಿದರೆ (1,411 ) ದ್ವಿಗುಣವಾಗಿದೆ.

Comments are closed.