ರಾಷ್ಟ್ರೀಯ

ಕೊರೋನಾ ಸಂಕಷ್ಟದಲ್ಲಿ ಶೇ. 60ರಷ್ಟು ಭಾರತೀಯರು; 9 ರಾಜ್ಯಗಳಲ್ಲಿ ಪರಿಸ್ಥಿತಿ ಗಂಭೀರ

Pinterest LinkedIn Tumblr


ನವದೆಹಲಿ (ಜುಲೈ 20); ಭಾರತದ ಅತಿಹೆಚ್ಚು ಜನಸಂಖ್ಯೆ ಹೊಂದಿರುವ 09 ರಾಜ್ಯಗಳ ಶೇ.60 ರಷ್ಟು ಜನ ಕೊರೋನಾ ಹೈರಿಸ್ಕ್‌ನಲ್ಲಿದ್ದಾರೆ. ಮುಂಬರುವ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಲಿದೆ ಎಂದು ದಿ ಲ್ಯಾನ್ಸೆಟ್ ಮೆಡಿಕಲ್‌ ಜರ್ನಲ್‌ನಲ್ಲಿ ಭಾರತ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳು, ಜನಸಂಖ್ಯಾಶಾಸ್ತ್ರ, ವಸತಿ ಮತ್ತು ನೈರ್ಮಲ್ಯ, ಸಾಂಕ್ರಾಮಿಕ ರೋಗಶಾಸ್ತ್ರ ಮತ್ತು ಆರೋಗ್ಯ ಸೌಲಭ್ಯ ವಲಯಗಳ ಮೇಲೆ ನಡೆಸಿದ ಅಧ್ಯಯನ ವರದಿ ಆಧರಿಸಿ ಎಚ್ಚರಿಕೆ ನೀಡಿರುವ ತಜ್ಞರು, “ಉತ್ತರ ಪ್ರದೇಶ, ಮಹಾರಾಷ್ಟ್ರ, ಬಿಹಾರ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಗುಜರಾತ್, ಒಡಿಶಾ, ತೆಲಂಗಾಣ ಮತ್ತು ಜಾರ್ಖಂಡ್ ನಲ್ಲಿ ಕೊರೋನಾ ಸಮಸ್ಯೆ ಹೆಚ್ಚಳವಾಗಲಿದೆ.

ಒಂದು ಹಂತದಲ್ಲಿ ಕೊರೋನಾ ಸೋಂಕು ವಿಪರೀತ ಹಂತಕ್ಕೆ ತಲುಪಿ ಈ ಒಂಭತ್ತು ರಾಜ್ಯಗಳು ಅತಿ ಹೆಚ್ಚು ಬಡತನ ಮತ್ತು ವೈದ್ಯಕೀಯ ಸೌಲಭ್ಯಗಳ ಕೊರತೆಗಳನ್ನು ಎದುರಿಸಲಿವೆ” ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಭಾರತದಲ್ಲಿ ಈಗಾಗಲೇ ಕೊರೋನಾ ಸೋಂಕಿತರ ಸಂಖ್ಯೆ 11 ಲಕ್ಷದ ಗಡಿ ದಾಟಿದೆ. ನಿನ್ನೆ ಒಂದೇ ದಿನ 40,425 ಪ್ರಕರಣಗಳು ಪತ್ತೆಯಾಗಿದ್ದು, ಕೊರೋನಾ ಪೀಡಿತರ ಸಂಖ್ಯೆ 11,18,043ಕ್ಕೆ ಏರಿಕೆಯಾಗಿದೆ. ಅಲ್ಲದೆ, ಒಂದೇ ದಿನದಲ್ಲಿ ದೇಶದಾದ್ಯಂತ ಕೊರೋನಾಗೆ 681 ಜನ ಬಲಿಯಾಗಿದ್ದು, ಮೃತರ ಸಂಖ್ಯೆಯೂ 27,497ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರ, ದೆಹಲಿ, ತಮಿಳುನಾಡು ಮತ್ತು ಕರ್ನಾಟಕದಲ್ಲಿ ಪರಿಸ್ಥಿತಿ ದಿನೇ ದಿನೇ ಕೈಮೀರುತ್ತಿದೆ.

ಇನ್ನೂ ಕರ್ನಾಟಕದಲ್ಲಿ ನಿನ್ನೆ ಒಂದೇ ದಿನಕ್ಕೆ 4,120 ಹೊಸ ಪ್ರಕರಣಗಳು ಪತ್ತೆಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆಯೂ 63 ಸಾವಿರ ದಾಟಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಅಧಿಕೃತ ಮಾಹಿತಿ ಬಿಡುಗಡೆ ಮಾಡಿದೆ.

ಒಟ್ಟು 63,772 ಮಂದಿಯ ಪೈಕಿ 23,065 ಮಂದಿಗೆ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​​ ಆಗಿದ್ಧಾರೆ. ಸದ್ಯ 39,370 ಸಕ್ರಿಯ ಕೇಸುಗಳು ಮಾತ್ರ ಬಾಕಿ ಇವೆ. ಈ ಮಾರಕ ಕೊರೋನಾಗೆ ನಿನ್ನೆ ಒಂದೇ ದಿನ 91 ಮಂದಿ ಅಸುನೀಗಿದ್ದಾರೆ. ಹೀಗಾಗಿ ರಾಜ್ಯದ ಕೋವಿಡ್​-19 ಮೃತರ ಸಂಖ್ಯೆಯೂ 1331ಕ್ಕೆ ಏರಿಕೆಯಾಗಿದೆ.

Comments are closed.