ರಾಷ್ಟ್ರೀಯ

ಬಿಆರ್ ಅಂಬೇಡ್ಕರ್ ಅವರ ಮುಂಬೈ ನಿವಾಸದ ಮೇಲೆ ದುಷ್ಕರ್ಮಿಗಳು ದಾಳಿ; ಮುಂಬೈ ನಿವಾಸ ಧ್ವಂಸ

Pinterest LinkedIn Tumblr

ಮುಂಬೈ: ಸಂವಿಧಾನ ಶಿಲ್ಪಿ ಬಿಆರ್ ಅಂಬೇಡ್ಕರ್ ಅವರ ಮುಂಬೈ ನಿವಾಸದ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದ್ದು, ಈ ಸಂಬಂಧ ದುಷ್ಕರ್ಮಿಗಳ ವಿರುದ್ಧ ಎಫ್ ಐಆರ್ ದಾಖಲಾಗಿದೆ.

ಮುಂಬೈನ ದಾದರ್ ನಲ್ಲಿರುವ ದಿ.ಡಾ.ಬಿಆರ್ ಅಂಬೇಡ್ಕರ್ ಅವರ ಐತಿಹಾಸಿಕ “ರಾಜ್ ಗೃಹ” ನಿವಾಸಕ್ಕೆ ನುಗ್ಗಿರುವ ದುಷ್ಕರ್ಮಿಗಳು ಹಲವು ವಸ್ತುಗಳನ್ನು ನಾಶಗೊಳಿಸಿದ್ದಾರೆ. ಮೂಲಗಳ ಪ್ರಕಾರ ಮಂಗಳವಾರ ಸಂಜೆ ಅಂಬೇಡ್ಕರ್ ಅವರ ರಾಜ್ ಗೃಹ ನಿವಾಸಕ್ಕೆ ಕನಿಷ್ಠ ಇಬ್ಬರು ಅಪರಿಚಿತ ವ್ಯಕ್ತಿಗಳು ಒಳನುಗ್ಗಿದ್ದರು. ಅಷ್ಟೇ ಅಲ್ಲ ಸಿಸಿಟಿವಿ ಕ್ಯಾಮರಾ, ಗ್ಲಾಸ್ ಪ್ಯಾನ್ಸ್, ಹೂ ಕುಂಡಗಳನ್ನು ಒಡೆದು ಹಾಕಿ ಸ್ಥಳದಿಂದ ಪರಾರಿಯಾಗಿದ್ದಾರೆ.

ಡಾ. ಅಂಬೇಡ್ಕರ್ ಅವರ ಮೊಮ್ಮಗ ಸುಜತ್ ಅವರು ಹೇಳಿರುವಂತೆ ಅಂಬೇಡ್ಕರ್ ಕುಟುಂಬಸ್ಥರು ಮನೆಯಲ್ಲಿದ್ದ ಸಂದರ್ಭದಲ್ಲೇ ಕಿಡಿಗೇಡಿಗಳು ಎರಡು ಕೊಠಡಿಗಳತ್ತ ಕಲ್ಲು ತೂರಿದ್ದಾರೆ. ಒಂದು ಕೊಠಡಿ ಮ್ಯೂಸಿಯಂ ಹಾಗೂ ಫೋಟೋ ಗ್ಯಾಲರಿ ಹಾಗೂ ಬಾಬಾಸಾಹೇಬ್ ಅವರ ಪುಸ್ತಕಗಳ ಕೊಠಡಿಯಾಗಿದ್ದರೆ ಇನ್ನೊಂದು ಅವರ ಕಚೇರಿ/ಸಭಾ ಕೊಠಡಿಯಾಗಿದೆ ಎಂದು ವಂಚಿತ್ ಬಹುಜನ್ ಅಘಾಡಿ ಅಧ್ಯಕ್ಷ, ಹಾಗೂ ಅಂಬೇಡ್ಕರ್ ಅವರ ಪುತ್ರ ಪ್ರಕಾಶ್ ಅಂಬೇಡ್ಕರ್ ಅವರ ಮಗನಾಗಿರುವ ಸುಜತ್ ತಿಳಿಸಿದ್ದಾರೆ.

ಇನ್ನು ಈ ವಿಚಾರ ತಿಳಿಯುತ್ತಲೇ ಪ್ರತಿಕ್ರಿಯೆ ನೀಡಿರುವ ಅಂಬೇಡ್ಕರ್ ಮೊಮ್ಮಗ ಡಾ.ಪ್ರಕಾಶ್ ಅಂಬೇಡ್ಕರ್ ಅವರು ಯಾವುದೇ ಕಾರಣಕ್ಕೂ ರಾಜ್ ಗೃಹ ಪ್ರದೇಶಕ್ಕೆ ತೆರಳಬೇಡಿ, ಅಲ್ಲದೇ ಶಾಂತಿ ಕಾಪಾಡಿ ಎಂದು ಮನವಿ ಮಾಡಿದ್ದಾರೆ. ಅಂಬೇಡ್ಕರ್ ಮೊಮ್ಮಕ್ಕಳಾದ ಡಾ.ಪ್ರಕಾಶ್ ಅಂಬೇಡ್ಕರ್ ಮತ್ತು ಭೀಮ್ ರಾವ್ ಅಂಬೇಡ್ಕರ್ ಹಾಗೂ ಇತರ ರಾಜಕೀಯ ಮುಖಂಡರು ದಲಿತ ಮುಖಂಡರಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಈ ಘಟನೆಯನ್ನು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್ ಖಂಡಿಸಿದ್ದು, ಕೂಡಲೇ ಆರೋಪಿಗಳನ್ನು ಬಂಧಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಈ ಸುದ್ದಿ ಹರಡುತ್ತಿದ್ದಂತೆಯೇ ಸ್ಥಳಕ್ಕೆ ದಲಿತ ಸಂಘಟನೆಯ ಸದಸ್ಯರು ಆಗಮಿಸಿ ಪ್ರತಿಭಟನೆ ನಡೆಸಿದ್ದಾರೆ.

Comments are closed.