ಹೈದರಾಬಾದ್: ತೆಲಂಗಾಣ ರಾಜಧಾನಿ ಹೈದರಾಬಾದಿನ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್-19 ನಿಂದ ಮೃತಪಟ್ಟ 34 ವರ್ಷದ ಯುವಕನೊಬ್ಬ ತಾನು ಸಾಯುವ ಮುನ್ನಾ ಮಾಡಿರುವ ಸೆಲ್ಫಿ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಉಸಿರಾಟದ ಸಮಸ್ಯೆ ಎದುರಾದಾಗ ಕೃತಕ ಆಮ್ಲಜನಕವನ್ನು ತನ್ನಗೆ ನೀಡಲಿಲ್ಲ ಎಂದು ಆತ ಆರೋಪಿಸಿದ್ದಾನೆ.
ಶುಕ್ರವಾರ ಈ ಘಟನೆ ನಡೆದಿದ್ದು, ಭಾನುವಾರದಿಂದ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವೆಂಟಿಲೇಟರ್ ತೆಗೆದುಹಾಕಿರುವುದರಿಂದ ಉಸಿರಾಡಲು ಆಗುತ್ತಿಲ್ಲ. ಆಮ್ಲಜನಕ ಪೂರೈಸುವಂತೆ ಮೂರು ಗಂಟೆಗಳಿಂದಲೂ ಕೇಳಿಕೊಳ್ಳುತ್ತಿದ್ದರೂ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ನನ್ನ ಹೃದಯ ನಿಂತಿದೆ. ಶ್ವಾಸಕೋಶಗಳು ಮಾತ್ರ ಕೆಲಸ ಮಾಡುತ್ತಿವೆ. ಆದರೆ, ಉಸಿರಾಡಲು ಆಗುತ್ತಿಲ್ಲ. ಬೈ ಡ್ಯಾಡಿ. ಬೈ ಆಲ್, ಬೈ ಡ್ಯಾಡಿ ಎಂದು ವಿಡಿಯೋ ಸೆಲ್ಫಿ ಮಾಡಿ, ಹೈದರಾಬಾದಿನ ಸರ್ಕಾರಿ ಎದೆ ರೋಗದ ಆಸ್ಪತ್ರೆಯಿಂದ ತನ್ನ ತಂದೆಗೆ ಕಳುಹಿಸಿದ್ದಾನೆ.
ಈ ವಿಡಿಯೋ ಕಳುಹಿಸಿದ ಕೆಲವೇ ನಿಮಿಷಕ್ಕೆ ಆತ ಇಹಲೋಕ ತ್ಯಜಿಸಿದ್ದಾನೆ. ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದಲೇ ಈತನ ಸಾವು ಸಂಭವಿಸಿದೆ ಎಂದು ಮೃತಪ್ಪಟ ಯುವಕ ರವಿಕುಮಾರ್ ತಂದೆ ವೆಂಕಟೇಶ್ ವಿಡಿಯೋ ಸಾಕ್ಷ್ಯ ಸಮೇತ ದೂರಿದ್ದಾರೆ.
ಜೂನ್ 23ರಂದು ರವಿಕುಮಾರ್ ಗೆ ತೀವ್ರ ರೀತಿಯ ಜ್ವರ ಬಂದಿದ್ದರಿಂದ ಹಲವು ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಲಾಯಿತು. ಆದರೆ, ಎಲ್ಲಿಯೂ ದಾಖಲು ಮಾಡಿಕೊಳ್ಳಲಿಲ್ಲ ನಂತರ ನಿಮ್ಸ್ ಗೆ ಹೋದಾಗ ಇರಾಗಾಡ್ಡಾದ ಸರ್ಕಾರಿ ಎದೆ ರೋಗ ಆಸ್ಪತ್ರೆಗೆ ಕರೆದೊಯ್ಯಲು ಶಿಪಾರಸು ಮಾಡಿದರು. ಜೂನ್. 24 ರಂದು ಅಲ್ಲಿಯೇ ದಾಖಲು ಮಾಡಲಾಯಿತು.ಆದರೆ, ಯಾರೂ ಕೂಡಾ ಸರಿಯಾಗಿ ನನ್ನ ಮಗನನ್ನು ನೋಡಿಕೊಳ್ಳಲಿಲ್ಲ. ಅಮ್ಲಜನಕವನ್ನು ಪೂರೈಸಿಲ್ಲ. ಆತ ಕೇಳಿಕೊಂಡರು ಕೂಡಾ ಆಕ್ಸಿಜನ್ ನೀಡಿಲ್ಲ , ಡಾಕ್ಟರ್ ಏನು ಮಾಡಿದ್ದಾರೆ ಎಂಬುದು ಗೊತ್ತಿಲ್ಲ. ಜೂನ್ 26 ರಂದು ಮುಂಜಾನೆ ರವಿ ಮೂರು ವಿಡಿಯೋ ಕಳುಹಿಸಿದ ನಂತರ ಆತ ಮೃತಪಟ್ಟ ಬಗ್ಗೆ ಆಸ್ಪತ್ರೆಯಿಂದ ಕರೆ ಬಂದಿದ್ದಾಗಿ ವೆಂಕಟೇಶ್ ನೋವು ಹೇಳಿಕೊಂಡಿದ್ದಾರೆ.
ಮೃತ ಯುವಕನ ಮನೆಯಲ್ಲಿ 6 ಮಂದಿ ಇದ್ದರು. ಆತನ ಅಜ್ಜಿ-ತಾಜ ಕೂಡಾ ಇದ್ದರು.ಎಲ್ಲರೂ ಈತನಿಂದಾಗಿ ಕೊರೊನಾ ಸೋಂಕಿತರಾಗಿರುವ ಭೀತಿ ಇದೆ.ಆದ್ರೆ, ತನ್ನ ಮಗನ ಕೊರೊನಾ ಪರೀಕ್ಷಾ ವರದಿಯೇ ತಡವಾಗಿ ಕೈಸೇರಿತು. ಹೀಗಾಗಿ, ಆತನನ್ನು ಆಸ್ಪತ್ರೆಗೆ ಸೇರಿಸಲೂ ತಡವಾಯ್ತು. ಇದೀಗ ನಾವೆಲ್ಲರೂ ಆತನ ಸಂಪರ್ಕದಲ್ಲಿದ್ದೆವು. ನಮ್ಮ ಪರೀಕ್ಷೆಯನ್ನೇ ಮಾಡಿಲ್ಲ ಎಂದು ಮೃತನ ತಂದೆ ಆಕ್ರೋಶ ವ್ಯಕ್ತಪಡಿಸುತ್ತಾರೆ. ರವಿ ಆತನ ಹೆಂಡತಿ ಹಾಗೂ ಇಬ್ಬರು ಮಕ್ಕಳನ್ನು ಆಗಲಿದ್ದಾರೆ. ಅವರಿಗೆ ನಾನು ಏನು ಹೇಳಲಿ ಎಂದು ಅವರು ಪ್ರಶ್ನಿಸುತ್ತಾರೆ.
ಹೈದರಾಬಾದ್‌ನ ಸರಕಾರಿ ಎದೆರೋಗ ಆಸ್ಪತ್ರೆ ವೈದ್ಯರು ಮಾತ್ರ ಮೃತನ ತಂದೆಯ ಆರೋಪಗಳನ್ನು ನಿರಾಕರಿಸಿದ್ದಾರೆ.
Comments are closed.