ರಾಷ್ಟ್ರೀಯ

ಭಾರತದ ಭೂಮಿಯನ್ನು ಪ್ರಧಾನಿ ಮೋದಿ ಚೀನಾಕ್ಕೆ ಒಪ್ಪಿಸಿದ್ದಾರೆ: ಆಕ್ರೋಶ ವ್ಯಕ್ತಪಡಿಸಿದ ರಾಹುಲ್ ಗಾಂಧಿ

Pinterest LinkedIn Tumblr

ನವದೆಹಲಿ: ಭಾರತ ಮತ್ತು ಚೀನಾ ಗಡಿಯಲ್ಲಿ ಉದ್ವಿಗ್ನತೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತೆಗೆದುಕೊಂಡ ತಪ್ಪು ನಡೆಗಳನ್ನು ಮೊದಲಿನಿಂದಲೂ ಪ್ರಶ್ನಿಸುತ್ತಿರುವ ವಿರೋಧ ಪಕ್ಷದ ಏಕೈಕ ನಾಯಕ ರಾಹುಲ್ ಗಾಂಧಿ ಅವರು ಈಗ ಭಾರತದ ಭೂಮಿಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಚೀನಾ ದೇಶಕ್ಕೆ ಒಪ್ಪಿಸಿದ್ದಾರೆ ಎಂಬ ಗಂಭೀರವಾದ ಆರೋಪ ಮಾಡಿದ್ದಾರೆ.

ಟ್ವೀಟ್ ಮೂಲಕ ನರೇಂದ್ರ ಮೋದಿ ಚೀನಾ ದೇಶಕ್ಕೆ ಒಪ್ಪಿಸಿದ್ದಾರೆ ಎಂದು ಆರೋಪಿಸಿರುವ ರಾಹುಲ್ ಗಾಂಧಿ ಅವರು, ಅದು ನಿಜಕ್ಕೂ ಚೀನಾ ದೇಶದ ಭೂಮಿಯೇ ಆಗಿದ್ದರೆ ಅಲ್ಲಿಗೆ ನಮ್ಮ ಸೈನಿಕರನ್ನು ಕಳಿಸಿ ಅವರು ಹುತಾತ್ಮರಾಗುವಂತೆ ಮಾಡಿದ್ದೇಕೆ? ನಿಜವಾಗಿಯೂ ಭಾರತದ ಸೈನಿಕರು ಹುತಾತ್ಮರಾದದ್ದು ಎಲ್ಲಿ? ಎಂಬ ಖಡಕ್ ಪ್ರಶ್ನೆಗಳನ್ನು ಕೇಳಿದ್ದಾರೆ. ಕಳೆದ ಸೋಮವಾರ ಗಡಿಯಲ್ಲಿ ಎರಡೂ ದೇಶಗಳ ಸೈನಿಕರ ನಡುವೆ ಸಂಘರ್ಷ ಶುರುವಾದ ಮೇಲೆ ಪ್ರಧಾನಿ ಮೋದಿ ಮತ್ತು ಕೇಂದ್ರ ಸರ್ಕಾರದ ನಡೆಗಳನ್ನು ರಾಹುಲ್ ಗಾಂಧಿ ನಿರಂತರವಾಗಿ ಪ್ರಶ್ನಿಸುತ್ತಿದ್ದಾರೆ. ‘ಗಡಿಯಲ್ಲಿ ಏನಾಗುತ್ತಿದೆ ಹೇಳಿ’ ಎಂದು ಒತ್ತಾಯಿಸುತ್ತಿದ್ದಾರೆ.

ಕಳೆದ ಗುರುವಾರ ನಮ್ಮ ನಿಶಸ್ತ್ರ ಸೈನಿಕರನ್ನು ಕೊಲ್ಲಲು ಚೀನಾಗೆ ಎಷ್ಟು ಧೈರ್ಯ? ಮತ್ತು ಸೈನಿಕರನ್ನು ನಿಶಸ್ತ್ರವಾಗಿ ಹುತಾತ್ಮರಾಗಲು ಕಳುಹಿಸಿದ್ದೇಕೆ? ಎಂಬ ಎರಡು ಪ್ರಮುಖ ಪ್ರಶ್ನೆಗಳನ್ನು ಎತ್ತಿದ್ದರು.

ಬುಧವಾರ ಭಾರತ -ಚೀನಾ ಗಡಿಯಲ್ಲಿ ಇಷ್ಟೆಲ್ಲಾ ಆಗುತ್ತಿದ್ದರೂ ಪ್ರಧಾನಿ ಮೋದಿ ಮೌನವಾಗಿರುವುದು ಏಕೆ? ಮೋದಿ ವಾಸ್ತವವನ್ನು ಏಕೆ ಮುಚ್ಚಿಡುತ್ತಿದ್ದಾರೆ? ಆಗಿದ್ದು ಆಯ್ತು, ಈಗ ಏನಾಗುತ್ತಿದೆ ಎಂಬುದನ್ನು ಹೇಳಿ. ನಮ್ಮ ಸೈನಿಕರನ್ನು ಹತ್ಯೆ ಮಾಡಲು ಚೀನಾಕ್ಕೆ ಎಷ್ಟು ಧೈರ್ಯ? ನಮ್ಮ ಜಾಗವನ್ನು ವಶಪಡಿಸಿಕೊಳ್ಳಲು ಚೀನಾಕ್ಕೆ ಎಷ್ಟು ಧೈರ್ಯ? ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನೆ ಮಾಡಿದ್ದರು.

ಇನ್ನೊಂದೆಡೆ ರಾಹುಲ್ ಗಾಂಧಿ ಅವರ ಸಹೋದರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಕೂಡ ‘ನಮ್ಮ ಭೂಮಿ, ನಮ್ಮ ಸಾರ್ವಭೌಮತ್ವಕ್ಕೆ ಬೆದರಿಕೆ ಇದೆ. ನಮ್ಮ ಸೈನಿಕರು ಮತ್ತು ಅಧಿಕಾರಿಗಳು ಹುತಾತ್ಮರಾಗಿದ್ದಾರೆ. ನಾವು ಸುಮ್ಮನಿರಲು ಸಾಧ್ಯವೇ? ನಮ್ಮ ಭೂಮಿ ವಾಪಸ್ ಪಡೆಯಲು ಭಾರತದ ನಾಯಕತ್ವ ಇಚ್ಛಾಶಕ್ತಿ ತೋರಬೇಕು. ಅಂಥ‌ ಇಚ್ಛಾಶಕ್ತಿ ತೋರಿಸಿ ನರೇಂದ್ರ ಮೋದಿ ಅವರೇ ಎಂದು ಟ್ವೀಟರ್ ಮೂಲಕ ಪ್ರಿಯಾಂಕಾ ಗಾಂಧಿ ಅವರು ಒತ್ತಾಯಿಸಿದ್ದರು.

ಇದಲ್ಲದೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕೂಡ ಭಾರತ ಮತ್ತು ಚೀನಾ ನಡುವೆ ನಡೆದ ಸಂಘರ್ಷದ ಕೇಂದ್ರ ಸರ್ಕಾರ ವಹಿಸಿರುವ ಮೌನವನ್ನು ಆಕ್ಷೇಪಿಸಿ ಗಡಿಯಲ್ಲಿ ಏನಾಗುತ್ತಿದೆ ಎಂಬ ವಸ್ತುಸ್ಥಿತಿಯನ್ನು ವಿವರಿಸುವಂತೆ ಆಗ್ರಹಿಸಿದ್ದರು‌. ಗಡಿಬಿಕ್ಕಟ್ಟನ್ನು ಬಗೆಹರಿಸಲು ಕೇಂದ್ರ ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂಬ ಬಗ್ಗೆ ಜನರಿಗೆ ಮಾಹಿತಿ ನೀಡಬೇಕೆಂದು ಒತ್ತಾಯಿಸಿದ್ದರು. ಒಂದೂವರೆ ತಿಂಗಳಿನಿಂದ ಚೀನಾ ಲಡಾಖ್​ನಲ್ಲಿ ನಮ್ಮ ಭೂಭಾಗವನ್ನು ಅತಿಕ್ರಮಿಸಿರುವುದು ಎಲ್ಲರಿಗೂ ಗೊತ್ತು. ಇವತ್ತು ಭಾರತ ಕೋಪೋದ್ರೇಕಗೊಂಡಿದೆ. ಚೀನಾ ನಮ್ಮ ಭಾರತದ ನೆಲವನ್ನ ವಶಪಡಿಸಿಕೊಳ್ಳಲು ಹಾಗೂ 20 ಸೈನಿಕರ ಬಲಿ ತೆಗೆದುಕೊಳ್ಳಲು ಹೇಗೆ ಸಾಧ್ಯವಾಯಿತು ಎಂಬುದನ್ನು ಪ್ರಧಾನ ಮಂತ್ರಿಗಳು ವಿವರಿಸಲಿ ಎಂದು ಸೋನಿಯಾ ಗಾಂಧಿ ಸವಾಲು ಹಾಕಿದ್ದರು.

ನಾಪತ್ತೆಯಾಗಿರುವ ಸೈನಿಕರು ಇದ್ದಾರೆಯೇ? ಗಂಭೀರ ಸ್ವರೂಪದಲ್ಲಿ ಗಾಯಗೊಂಡಿರುವ ಸೈನಿಕರು ಮತ್ತು ಸೇನಾಧಿಕಾರಿಗಳ ಸಂಖ್ಯೆ ಎಷ್ಟು? ಚೀನಾ ಯಾವೆಲ್ಲಾ ಪ್ರದೇಶಗಳನ್ನು ವಶಪಡಿಸಿಕೊಂಡಿದೆ? ಇದರ ಬಗ್ಗೆ ಸರ್ಕಾರದ ಚಿಂತನೆ ಮತ್ತು ತಂತ್ರಗಳೇನು? ಎಂದು ಎಐಸಿಸಿ ಅಧ್ಯಕ್ಷೆ ಪ್ರಶ್ನೆಗಳನ್ನು ಹಾಕಿದ್ದರು‌. ಇದಲ್ಲದೆ ಈ ಕಷ್ಟದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ಸರ್ಕಾರ ಹಾಗೂ ಸೇನೆಯ ಬೆಂಬಲಕ್ಕೆ ನಿಲ್ಲುತ್ತದೆ ಎಂದು ಭರವಸೆ ನೀಡಿದ್ದರು.

Comments are closed.