ರಾಷ್ಟ್ರೀಯ

ತಮಿಳುನಾಡಿನಲ್ಲಿ ಒಂದೇ ದಿನ 2,141 ಕೊರೋನಾ ಪ್ರಕರಣಗಳು ಪತ್ತೆ​​: 625 ಮಂದಿ ಬಲಿ

Pinterest LinkedIn Tumblr


ಚೆನ್ನೈ(ಜೂ.19): ಮಾರಕ ಕೋವಿಡ್​​-19 ವೈರಸ್​ ಆರ್ಭಟ ತಮಿಳುನಾಡಿನಲ್ಲಿ ಮುಂದುವರಿದಿದೆ. ನಿನ್ನೆ ಒಂದೇ ದಿನ 24 ಗಂಟೆಯಲ್ಲಿ 2,141 ಕೊರೋನಾ ಪಾಸಿಟಿವ್​​ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ತಮಿಳುನಾಡಿನಲ್ಲಿ ಕೋವಿಡ್​​-19 ಸೋಂಕಿತರ ಸಂಖ್ಯೆ 52,334ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಹೆಲ್ತ್​​​ ಬುಲೆಟಿನ್​​ನಿಂದ ತಿಳಿದು ಬಂದಿದೆ.

ಸದ್ಯ, ತಮಿಳುನಾಡಿನಲ್ಲಿ ಒಟ್ಟು 52,334 ಕೋವಿಡ್​​-19 ಪ್ರಕರಣಗಳು ದಾಖಲಾಗಿದೆ. ಈ ಪೈಕಿ ಚೆನ್ನೈವೊಂದರಲ್ಲೇ ಅತೀ ಹೆಚ್ಚು ಅಂದರೆ 36 ಸಾವಿರ ಕೇಸುಗಳು ವರದಿಯಾಗಿವೆ. ಇನ್ನು, ಈ ಮಾರಕ ಕೊರೋನಾಗೆ ಇದುವರೆಗೂ 625 ಮಂದಿ ಬಲಿಯಾಗಿದ್ದಾರೆ.

ಇತ್ತೀಚೆಗೆ ತಮಿಳುನಾಡಿನಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಇದೇ ಕಾರಣಕ್ಕೆ ಮದ್ರಾಸ್ ಹೈಕೋರ್ಟ್ ಕೂಡ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಕೋವಿಡ್-19 ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಚಾಟಿ ಬೀಸಿತ್ತು. ಈ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಸಿಎಂ ಇ ಪಳನಿ ಸ್ವಾಮಿ ನೇತೃತ್ವದ ರಾಜ್ಯ ಸರ್ಕಾರ ತಮಿಳುನಾಡಿನಲ್ಲಿ ಕೋವಿಡ್​​-19 ಪ್ರಕರಣಗಳು ಸಂಖ್ಯೆ ಹೆಚ್ಚಿರುವ ಪ್ರಮುಖ ನಗರಗಳಲ್ಲಿ ಸಂಪೂರ್ಣ ಲಾಕ್​​ಡೌನ್ ಘೋಷಣೆ ಮಾಡಿದೆ.

ತಮಿಳುನಾಡು ರಾಜಧಾನಿ ಚೆನ್ನೈ, ತಿರುವಳ್ಳೂರ್, ಚೆಂಗಲ್ ಪೇಟ್ ಮತ್ತು ಕಾಂಚಿಪುರಂನಲ್ಲಿ ಸಂಪೂರ್ಣ ಲಾಕ್​​ಡೌನ್ ಘೋಷಣೆ ಮಾಡಲಾಗಿದೆ. ಹಾಗೆಯೇ ಸೋಂಕಿತರಿಲ್ಲದ ಪ್ರದೇಶಗಳಲ್ಲಿ ಲಾಕ್​​ಡೌನ್ ವಿನಾಯಿತಿ ನೀಡಲಾಗಿದೆ. ಜತೆಗೆ ತಮಿಳುನಾಡು ಸರ್ಕಾರ ಕೊರೋನಾ ವೈರಸ್​​​ ನಿಯಂತ್ರಣಕ್ಕೆ ತರಲು ಕೇಂದ್ರದಿಂದ 9 ಸಾವಿರ ರೂ. ಹಣ ನೀಡಿ ಎಂದು ಪಟ್ಟು ಹಿಡಿದಿದೆ.

Comments are closed.