
ತೆಲಂಗಾಣ (ಜೂನ್ 19); ಭಾರತ-ಚೀನಾ ಗಡಿ ಭಾಗದ ಗಾಲ್ವಾನ್ ಕಣಿವೆಯಲ್ಲಿ ಕಳೆದ ಸೋಮವಾರ ರಾತ್ರಿ ನಡೆದ ಘರ್ಷಣೆಯಲ್ಲಿ ಮೃತಪಟ್ಟ ತೆಲಂಗಾಣ ರಾಜ್ಯದ ಯೋಧ ಕರ್ನಲ್ ಸಂತೋಷ್ ಬಾಬು ಕುಟುಂಬಕ್ಕೆ 5 ಕೋಟಿ ರೂ ಪರಿಹಾರ, ಒಂದು ನಿವೇಶನ ಮತ್ತು ಕುಟುಂಬದಲ್ಲಿ ಒಬ್ಬರಿಗೆ ಸರ್ಕಾರಿ ಕೆಲಸ ನೀಡುವುದಾಗಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಇಂದು ಘೋಷಿಸಿದ್ದಾರೆ.
ಕರ್ನಲ್ ಸಂತೋಷ್ ಬಾಬು ಅವರ ಮೃತ ದೇಹ ಈಗಾಗಲೇ ತೆಲಂಗಾಣದ ಸೂರ್ಯಪೇಟ್ಗೆ ಆಗಮಿಸಿದ್ದು ಇಡೀ ಕುಟುಂಬ ಒಟ್ಟಾಗಿ ಅಂತ್ಯಕ್ರಿಯೆಯನ್ನು ನೆರವೇರಿಸಿದೆ. ಅಂತ್ಯಕ್ರಿಯೆಯಲ್ಲಿ ಭಾರೀ ಸಂಖ್ಯೆಯ ಜನ ಸೇರಿದ್ದು ಯೋಧನಿಗೆ ಗೌರವಪೂರ್ಣ ವಿದಾಯ ನೀಡಿದ್ದಾರೆ ಎಂದು ವರದಿಯಾಗಿದೆ.
ಗಾಲ್ವಾನ್ ಕಣಿವೆಯಲ್ಲಿ ಕಳೆದ ಸೋಮವಾರ ರಾತ್ರಿ ನಡೆದ ಸಂಘರ್ಷ ಕಳೆದ 45 ವರ್ಷಗಳಲ್ಲೇ ನಡೆದ ಮೊದಲ ಭೀಕರ ಸಂಘರ್ಷ ಎನ್ನಲಾಗಿದೆ. ಈ ಸಂಘರ್ಷದಲ್ಲಿ ಭಾರತದ 20 ಜನ ಸೈನಿಕರು ಮೃತಪಟ್ಟಿದ್ದಾರೆ. ಆದರೆ, ಚೀನಾ ಸೈನಿಕರೂ ಸಹ ಮೃತಪಟ್ಟಿದ್ದು, ಮೃತಪಟ್ಟವರ ನಿಖರ ಸಂಖ್ಯೆಯನ್ನು ಚೀನಾ ಸರ್ಕಾರ ಈವರೆಗೆ ಘೋಷಿಸಿಲ್ಲ.
Comments are closed.