ರಾಷ್ಟ್ರೀಯ

ಶಾಲಾ-ಕಾಲೇಜುಗಳ ಮರು ಪ್ರಾರಂಭದ ದಿನಾಂಕ ಘೋಷಿಸಿದ ಕೇಂದ್ರ ಸಚಿವ

Pinterest LinkedIn Tumblr


ನವದೆಹಲಿ:ಕೊರೋನಾದಿಂದಾಗಿ ದೇಶದೆಲ್ಲೆಡೆ ಲಾಕ್​ಡೌನ್​ ಆಗಿ ಮುಚ್ಚಲ್ಪಟ್ಟಿರುವ ಶಾಲಾ-ಕಾಲೇಜುಗಳನ್ನು ಯಾವಾಗ ಆರಂಭಿಸಬೇಕು ಎಂಬುದರ ಬಗ್ಗೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್​ ನಿಶಾಂಕ್​ ಪೋಖ್ರಿಯಾಲ್​ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ.

ಖಾಸಗಿ ಸುದ್ದಿ ವಾಹಿನಿಯೊಂದರ ಸಂದರ್ಶನಲ್ಲಿ ಮಾತನಾಡಿದ ಕೇಂದ್ರ ಮಾನವ ಅಭಿವೃದ್ಧಿ ಸಚಿವ, ರಮೇಶ್​ ಪೋಖ್ರಿಯಾಲ್​, ದೇಶಾದ್ಯಂತ ಮಾರ್ಚ್​ 16ರಿಂದ ಮುಚ್ಚಲ್ಪಟ್ಟಿರುವ ಶಾಲಾ-ಕಾಲೇಜುಗಳನ್ನು ಆಗಸ್ಟ್​ ತಿಂಗಳಿನಲ್ಲಿ ಮರು ಪ್ರಾರಂಭಿಸಲಾಗುವುದು ಎಂದು ಹೇಳಿದ್ದಾರೆ.

ದೇಶಾದ್ಯಂತ ಲಾಕ್​ಡೌನ್ ಜಾರಿಯಾಗಿ ಸುಮಾರು 70 ದಿನಗಳೇ ಕಳೆದಿವೆ. ವಿದ್ಯಾರ್ಥಿಗಳು ಬಾಕಿ ಉಳಿದಿರುವ ಪರೀಕ್ಷೆಗಳನ್ನು ಬರೆಯಲು ಕಾಯುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಕೇಂದ್ರ ಸಚಿವ ರಮೇಶ್​ ಪೋಖ್ರಿಯಾಲ್​ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಇದೇ ಜೂನ್​ 3ರಂದು ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಆಗಸ್ಟ್​ 15ರ ಬಳಿಕ ಶಾಲೆಗಳು ಆರಂಭವಾಗಲಿವೆ ಎಂದು ತಿಳಿಸಿದ್ದಾರೆ.

ಆಗಸ್ಟ್​ 15ರೊಳಗೆ ಪರೀಕ್ಷೆಗಳ ಫಲಿತಾಂಶವನ್ನು ಪ್ರಕಟಿಸಲಾಗುವುದು. ಆ ಬಳಿಕವಷ್ಟೇ ಶಾಲೆಗಳನ್ನು ಪ್ರಾರಂಭಿಸಲಾಗುವುದು ಎಂದು ಪೋಖ್ರಿಯಾಲ್​ ಹೇಳಿದ್ದಾರೆ.

ಕೊರೋನಾ ವೈರಸ್​​ನಿಂದಾಗಿ ಕೆಲವು ಬೋರ್ಡ್​ ಪರೀಕ್ಷೆಗಳನ್ನು ಮಾರ್ಚ್​​ ತಿಂಗಳಿನಲ್ಲಿ ಮುಂದೂಡಲಾಗಿತ್ತು. ಆ ಪರೀಕ್ಷೆಗಳನ್ನು ಮುಂದಿನ ತಿಂಗಳು ನಡೆಸಲಾಗುವುದು. ಇನ್ನು, ಸ್ಪರ್ಧಾತ್ಮಕ ಪರೀಕ್ಷೆಗಳಾದ ನೀಟ್​, ಜೆಇಇ ಹಾಗೂ ಇನ್ನುಳಿದ ಪರೀಕ್ಷೆಗಳನ್ನು ಸಹ ಜುಲೈ ತಿಂಗಳಿನಲ್ಲಿಯೇ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.

Comments are closed.