ರಾಷ್ಟ್ರೀಯ

ಬಿಲ್‌ ಪಾವತಿಸದ ವೃದ್ಧನನ್ನು ಬೆಡ್ಡಿಗೆ ಕಟ್ಟಿಹಾಕಿದ ಆಸ್ಪತ್ರೆ

Pinterest LinkedIn Tumblr


ಭೋಪಾಲ್‌ (ಮಧ್ಯಪ್ರದೇಶ): ಪಡೆದ ಚಿಕಿತ್ಸೆಗೆ ಹಣ ಪಾವತಿಸದ್ದರಿಂದ ಖಾಸಗಿ ಆಸ್ಪತ್ರೆಯ ಸಿಬ್ಬಂದಿ ವೃದ್ಧರೊಬ್ಬರನ್ನು ಬೆಡ್‌ ಮೇಲೆ ಕಟ್ಟಿ ಹಾಕಿದ ಅಮಾನವೀಯ ಘಟನೆಯೊಂದು ಮಧ್ಯಪ್ರದೇಶದಲ್ಲಿ ನಡೆದಿದೆ. ಆದರೆ, ಶಾಜಾಪುರ್‌ ಮೂಲದ ಖಾಸಗಿ ಆಸ್ಪತ್ರೆ ಆಡಳಿತ ಮಂಡಳಿ ವೃದ್ಧನಿಗೆ ಸ್ನಾಯು ಸೆಳೆತ ಉಂಟಾಗಿದ್ದು, ಆತ ತನಗೆ ತಾನೇ ಗಾಯಮಾಡಿಕೊಳ್ಳಬಾರದು ಎಂದು ಕಟ್ಟಿ ಹಾಕಿದ್ದೇವೆ ಎಂದು ಪ್ರಕರಣ ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ.

ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರ ಗಮನಕ್ಕೂ ಈ ಘಟನೆ ಬಂದಿದ್ದು, ಶಾಜಾಪುರ ಮೂಲದ ಆಸ್ಪತ್ರೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಇನ್ನು, ಈ ಬಗ್ಗೆ ತನಿಖೆ ನಡೆಸಲು ಅಲ್ಲಿನ ಜಿಲ್ಲಾಸ್ಪತ್ರೆಯೂ ಕೂಡ ಆದೇಶಿಸಿದೆ.

11 ಸಾವಿರ ರೂ. ಪಾವತಿಸಲು ಆಗದಿದ್ದಕ್ಕೆ ಕೈ-ಕಾಲು ಕಟ್ಟಿ ಬೆಡ್‌ ಮೇಲೆ ಹಾಕಿದ್ದಾರೆ ಎಂದು ವೃದ್ಧನ ಕುಟುಂಬ ಆಸ್ಪತ್ರೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಆಸ್ಪತ್ರೆಗೆ ದಾಖಲಾಗುವಾಗ 5,000 ರೂ. ಪಾವತಿಸಿದ್ದೇವೆ. ಆದರೆ, ಚಿಕಿತ್ಸೆಗೆ ಹೆಚ್ಚಿನ ದಿನವಾಗಿದ್ದರಿಂದ, ಉಳಿದ ಹಣವನ್ನು ಪಾವತಿಸಲು ನಮ್ಮ ಬಳಿ ದುಡ್ಡಿಲ್ಲ ಎಂದು ವೃದ್ಧನ ಮಗಳು ಹೇಳಿದ್ದಾರೆ.

ಆದರೆ, ಆಸ್ಪತ್ರೆಯವರು ಪ್ರಕರಣ ಮುಚ್ಚಿಹಾಕಲು ಬೇರೊಂದು ರೀತಿ ಹೇಳುತ್ತಿದ್ದು, ವೃದ್ಧನಿಗೆ ಎಲೆಕ್ಟ್ರೋಲೈಟ್‌ ಅಸಮತೋಲನದಿಂದ ಸ್ನಾಯು ಸೆಳೆತ ಉಂಟಾಗಿತ್ತು. ಅವರಿಗೆ ಯಾವುದೇ ತೊಂದರೆಯಾಗಬಾರದು ಎಂದು ಕಟ್ಟಿ ಹಾಕಿದ್ದೇವು ಎಂದು ಆಸ್ಪತ್ರೆಯ ವೈದ್ಯರು ಹೇಳುತ್ತಿದ್ದಾರೆ.

ಘಟನೆ ನಡೆದ ನಂತರ, ಮಾನವೀಯತೆ ದೃಷ್ಟಿಯಿಂದ ಅವರು ಪಾವತಿಸಬೇಕಾದ ಹಣವನ್ನು ಮನ್ನಾ ಮಾಡಲಾಗಿದೆ ಎಂದು ಆಸ್ಪತ್ರೆ ತಿಳಿಸಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಶಾಜಾಪುರ್‌ ಜಿಲ್ಲಾಡಳಿತ ಆಸ್ಪತ್ರೆಯ ವಿರುದ್ಧ ತನಿಖೆಗೆ ಆದೇಶಿಸಿದೆ.

Comments are closed.