ರಾಷ್ಟ್ರೀಯ

ಮುಸ್ಲಿಂ ದಂಪತಿಯಿಂದ ನೆರವೇರಿದ ಹಿಂದೂ ಯುವತಿಯ ವಿವಾಹ

Pinterest LinkedIn Tumblr


ಮಚ್ಚಿವರ: ಕೊರೊನಾವ ವೈರಸ್ ಲಾಕ್‌ಡೌನ್ ನಿಯಮಗಳು ಜಾರಿಯಲ್ಲಿರುವುದರ ಹಿನ್ನೆಲೆಯಲ್ಲಿ ನವ ಜೀವನಕ್ಕೆ ಕಾಲಿಡುತ್ತಿರುವ ಹಿಂದೂ ಯುವತಿಯ ವಿವಾಹ ನೆರವೇರಿಸುವ ಮೂಲಕ ಮುಸ್ಲಿಂ ದಂಪತಿಗಳು ಎಲ್ಲೆಡೆಗಳಿಂದ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಲೂಧಿಯಾನಾ ಜಿಲ್ಲೆಯ ಭಾಟಿಯಾನ್‌ನಲ್ಲಿರುವ ಹಿಂದೂ ದಂಪತಿಗಳ ವಿವಾಹವನ್ನು ನೆರವೇರಿಸಲಾಗಿದೆ. ಸುದೇಶ್ ಕುಮಾರ್ ಅವರೊಂದಿಗೆ 22 ವರ್ಷದ ಪೂಜಾ ಎಂಬವರ ವಿವಾಹವು ನಿಗದಿಯಾಗಿತ್ತು.

ಆದರೆ ಕೊರೊನಾ ವೈರಸ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಪೋಷಕರಿಗೆ ಆಗಮಿಸಲು ಸಾಧ್ಯವಾಗಲಿಲ್ಲ. ಪರಿಣಾಮ ಮುಸ್ಲಿಂ ದಂಪತಿಗಳಾದ ಅಬ್ದುಲ್ ಸಾಜೀದ್ ಹಾಗೂ ಸೋನಿ ಹಿಂದೂ ಯುವತಿಯ ಕನ್ಯಾದಾನವನ್ನು ಮಾಡಿದರು.

ಲಾಕ್‌ಡೌನ್‌ಗಿಂತಲೂ ಮುಂಚೆಯೇ ಪೂಜಾ ವಿವಾಹವನ್ನು ನಿಗದಿಪಡಿಸಲಾಗಿತ್ತು. ಆದರೆ ಉತ್ತರ ಪ್ರದೇಶದ ಮೊರಾದಾಬಾದ್‌ನ ಹುಟ್ಟೂರು ಗ್ರಾಮಕ್ಕೆ ಹೋಗಿದ್ದ ಕೃಷಿ ಕೆಲಸಗಾರನಾಗಿರುವ ಅಪ್ಪ ವರಿಂದರ್ ಕುಮಾರ್, ತಾಯಿ, ಸೋದರ ಹಾಗೂ ಮೂವರು ಸಹೋದರಿಯರು ಲಾಕ್‌ಡೌನ್‌ನಿಂದಾಗಿ ಅಲ್ಲೇ ಸಿಕ್ಕಿ ಹಾಕಿಕೊಂಡಿದ್ದರು.

“ಮದುಮಗನ ಕುಟುಂಬವು ಮದುವೆ ಬಗ್ಗೆ ವಿಚಾರಿಸಿದಾಗ ಪೂಜಾಳ ಹೆತ್ತವರನ್ನು ನಾನು ಕರೆ ಮಾಡಿದೆ. ಅವರು ಮದುವೆಯೊಂದಿಗೆ ಮುಂದುವರಿಯಬಹುದು ಎಂದು ಹೇಳಿದರು. ಹಿಂದೂ ಸಂಪ್ರದಾಯದಂತೆ ಎಲ್ಲ ಸಿದ್ಧತೆಗಳನ್ನು ನಾವು ನಡೆಸಿದ್ದೇವೆ. ಮಚ್ಚಿವರ ಪಂಡಿತರ ನೇತೃತ್ವದಲ್ಲಿ ಮದುವೆ ನಡೆಸಲಾಗಿದೆ. ಮದುಮಗನ ಕುಟುಂಬಕ್ಕೆ ಭೋಜನವನ್ನು ತಯಾರಿಸಿದ್ದೇವೆ. ನವ ದಂಪತಿಗಳಿಗೆ ಕಪಾಟು, ಡಬಲ್ ಬೆಡ್ ಹಾಗೂ ಪಾತ್ರೆಗಳನ್ನು ಉಡುಗೊರೆಯಾಗಿ ನೀಡಿರುವುದಾಗಿ” ಅಬ್ದುಲ್ ಸಾಜೀದ್ ವಿವರಿಸಿದರು.

“ವಧು ನನ್ನನ್ನು ಮಾವ ಹಾಗೂ ಪತ್ನಿಯನ್ನು ಮಾಮಿ ಎಂದು ಸಂಭೋದಿಸುತ್ತಾರೆ. ಹಾಗಾಗಿ ಆಕೆಗಾಗಿ ಏನು ಮಾಡಬೇಕೋ ಅದನ್ನು ಮಾಡಿದ್ದೇವೆ. ನಾವು ಸುಮಾರು ಐದು ವರ್ಷಗಳಿಂದ ಪರಿಚಯದಲ್ಲಿದ್ದೇವೆ. ಭಾರತದಲ್ಲಿ ವಿವಿಧ ಧರ್ಮದ ನಂಬಿಕೆಗಳು ಪರಸ್ಪರ ಬೆರೆಯುವ ಅನೇಕ ಉದಾಹರಣೆಗಳಿವೆ. ಹೆತ್ತವರು ಮದುವೆಗೆ ಹಣವನ್ನು ಕಳುಹಿಸಿರುವುದಾಗಿ” ಸಾಜೀದ್ ತಿಳಿಸಿದರು.

ಪೂಜಾ ನಮಗೆ ಮಗಳ ಹಾಗೆಯೇ ಆಗಿದ್ದು, ಮದುವೆ ಸರಳವಾದರೂ ಹಿಂದೂ ಸಂಪ್ರದಾಯದಂತೆ ಎಲ್ಲ ಪದ್ಧತಿಗಳನ್ನು ಖಚಿತಪಡಿಸಿದ್ದೇವೆ ಎಂದು ಸೋನಿ ತಿಳಿಸಿದರು. ಅಂದ ಹಾಗೆ ಲಾಕ್‌ಡೌನ್ ನಿಯಮ ಜಾರಿಯಲ್ಲಿರುವುದರಿಂದ ಬಹಳ ಸರಳವಾಗಿ ವಿವಾಹ ನೆರವೇರಿದೆ.

Comments are closed.