ರಾಷ್ಟ್ರೀಯ

ಸೇನೆಯಿಂದ ಜೈಷೆ ಮೊಹಮ್ಮದ್‌ನ ‘ಬಾಂಬ್ ಎಕ್ಸ್‌ಪರ್ಟ್‌’ ಹತ್ಯೆ

Pinterest LinkedIn Tumblr


ಶ್ರೀನಗರ: ಜೈಷೆ ಮೊಹಮ್ಮದ್‌ ಉಗ್ರ ಸಂಘಟನೆಯ ಬಾಂಬ್‌ ತಜ್ಞ ಅಬ್ದುಲ್‌ ರೆಹಮಾನ್‌ ಅಲಿಯಾಸ್ ಫೌಜಿ ಭಾಯ್‌ನನ್ನು ಪುಲ್ವಾಮದಲ್ಲಿ ಬುಧವಾರ ಮುಂಜಾನೆ ಭದ್ರತಾ ಪಡೆಗಳು ಹೊಡೆದುರುಳಿಸಿವೆ.

ಬುಧವಾರದ ಎನ್‌ಕೌಂಟರ್‌ನಲ್ಲಿ ಒಟ್ಟು ಮೂರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಇವರಲ್ಲಿ ಓರ್ವ ಅಬ್ದುಲ್‌ ರೆಹಮಾನ್‌. ಈ ಗುಂಡಿನ ಚಕಮಕಿಯಲ್ಲಿ ಓಬ್ಬರು ಯೋಧರಿಗೂ ಗಾಯವಾಗಿದೆ. ಅಬ್ದುಲ್‌ ರೆಹಮಾನ್‌ ಸುಧಾರಿತ ಸ್ಪೋಟಕಗಳ (ಐಇಡಿ) ತಜ್ಞನಾಗಿದ್ದು, ಹಿಜ್ಬುಲ್‌ ಮುಜಾಹಿದ್ದೀನ್‌ ಮುಖ್ಯಸ್ಥ ರಿಯಾಜ್‌ ನೈಕೂ ಹತ್ಯೆಯಾದ ಒಂದು ತಿಂಗಳ ನಂತರ ಈತನ ಹತ್ಯೆಯಾಗಿದೆ.

“ಇದು ಸೇನೆ, ಸಿಆರ್‌ಪಿಎಫ್‌ ಮತ್ತು ಪೊಲೀಸರ ಪಾಲಿಗೆ ರಿಯಾಜ್‌ ನೈಕೂ ಹತ್ಯೆ ನಂತರದ ಎರಡನೇ ಅತೀ ದೊಡ್ಡ ಯಶಸ್ಸು. ಇನ್ನಿಬ್ಬರು ಉಗ್ರರ ಗುರುತು ಪತ್ತೆಯಾಗಿಲ್ಲ,” ಎಂಬುದಾಗಿ ಕಾಶ್ಮೀರ ವಲಯದ ಐಜಿಪಿ ವಿಜಯ್‌ ಕುಮಾರ್‌ ಹೇಳಿದ್ದಾರೆ. ಕಳೆದ ವಾರ ಪುಲ್ವಾಮದಲ್ಲಿ ವಶಪಡಿಸಿಕೊಂಡ ಕಾರಿನಲ್ಲಿದ್ದ ಬಾಂಬ್‌ನ್ನು ಈತನೇ ತಯಾರಿಸಿದ್ದ ಎಂಬುದಾಗಿ ಅವರು ಮಾಹಿತಿ ನೀಡಿದ್ದಾರೆ.

ಬುಧವಾರ ಮುಂಜಾನೆ ಸೇನೆ, ಸಿಆರ್‌ಪಿಎಫ್‌ ಮತ್ತು ಪೊಲೀಸರು ಒಟ್ಟಾಗಿ ಪುಲ್ವಾಮದಲ್ಲಿ ಜಂಟಿಯಾಗಿ ಆಪರೇಷನ್‌ ಆರಂಭಿಸಿದ್ದರು. ಸ್ವಲ್ಪ ಹೊತ್ತಿನಲ್ಲೇ ಮೂವರು ಉಗ್ರರನ್ನು ಹೊಡೆದುರುಳಿಸಲಾಗಿತ್ತು.

“ಪಾಕಿಸ್ತಾನ ಪ್ರಜೆ ಅಬ್ದುಲ್‌ ರೆಹಮಾನ್‌ ಅಲಿಯಾಸ್‌ ಫೌಜಿ ಭಾಯ್‌ ಹತ್ಯೆ ಭದ್ರತಾ ಪಡೆಗಳ ಪಾಲಿಗೆ ದೊಡ್ಡ ಯಶಸ್ಸು. ಈತ ಜೈಷೆ ಪಾಲಿನ ಸುಧಾರಿತ ಸ್ಫೋಟಕಗಳ ‘ಮಾಸ್ಟರ್‌ ಮೈಂಡ್’‌,” ಎಂಬುದಾಗಿ ವಿಜಯ್‌ ಕುಮಾರ್‌ ವಿವರಿಸಿದ್ದಾರೆ.

Comments are closed.