ರಾಷ್ಟ್ರೀಯ

ಹಳ್ಳಿಗೆ ಬಂದಿರುವ ವಲಸೆ ಕಾರ್ಮಿಕರಿಗೂ ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ 6,000 ರೂ

Pinterest LinkedIn Tumblr


ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ದೇಶದ ಸುಮಾರು ಹತ್ತು ಕೋಟಿ ರೈತರಿಗೆ ಸಂಕಷ್ಟದ ಕಾಲದಲ್ಲಿ ದೊಡ್ಡ ಬೆಂಬಲವಾಗಿ ನಿಂತಿದೆ. ಈ ಯೋಜನೆಯ ಎಲ್ಲಾ ಷರತ್ತುಗಳನ್ನೂ ಪೂರೈಸಿದರೆ ಇದೀಗ ವಲಸೆ ಕಾರ್ಮಿಕರೂ ಸಹ ಇದರ ಪ್ರಯೋಜನವನ್ನು ಪಡೆಯಬಹುದಾಗಿದೆ. ಆದರೆ, ಈ ಸವಲತ್ತನ್ನು ಪಡೆಯಲು ಅವರು ವಯಸ್ಕರಾಗಿರಬೇಕು ಮತ್ತು ಅವರ ಹೆಸರನ್ನು ತೆರಿಗೆ ಇಲಾಖೆ ದಾಖಲೆಗಳಲ್ಲಿ ಸೇರಿಸಬೇಕು. ಕೃಷಿ ದಾಖಲೆಯಲ್ಲಿ ಯಾರೊಬ್ಬರ ಹೆಸರನ್ನು ಸೇರಿಸಿದ್ದರೆ ಅವರು ಜಂಟಿ ಕುಟುಂಬದ ಸದಸ್ಯರಾಗಿದ್ದರೂ ಸಹ ಪ್ರತ್ಯೇಕವಾಗಿ ಈ ಯೋಜನೆಯ ಪ್ರಯೋಜನವನ್ನು ತೆಗೆದುಕೊಳ್ಳಬಹುದಾಗಿದೆ.

ಕಿಸಾನ್ ಸಮ್ಮಾನ್ ಯೋಜನೆಯ ಮೂಲಕ ವಲಸೆ ಕಾರ್ಮಿಕರಿಗೂ ಸಹ ಹಣವನ್ನು ನೀಡಲು ಕೇಂದ್ರ ಸರ್ಕಾರ ಸಜ್ಜಾಗಿದೆ. ಕಾರ್ಮಿಕರು ಅರ್ಜಿ ಸಲ್ಲಿಸಲು ಮತ್ತು ನೋಂದಣಿ ಮಾಡಿಕೊಳ್ಳಲು ಎಲ್ಲಿಗೂ ಹೋಗಬೇಕಾದ ಅವಶ್ಯಕತೆ ಇಲ್ಲ. ಯೋಜನೆಯ ವೆಬ್ಸೈಟ್ ಮೂಲಕವೇ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಆದರೆ, ಕಾರ್ಮಿಕರು ಸರ್ಕಾರದ ಈ ಎಲ್ಲಾ ಷರತ್ತುಗಳನ್ನು ಅನುಸರಿಸುತ್ತಿರಬೇಕು ಎಂದು ಕ್ಯಾಬಿನೆಟ್ ಕೃಷಿ ರಾಜ್ಯ ಸಚಿವ ಕೈಲಾಶ್ ಚೌಧರಿ ತಿಳಿಸಿದ್ಧಾರೆ.

ಯಾರಿಗೆಲ್ಲಾ ಪಿಎಂ ಕಿಸಾನ್ ಯೋಜನೆಯ ಲಾಭ?

ರೈತರಿಗೆ ನೇರವಾಗಿ ಸಹಾಯ ಮಾಡುವ ಈ ರೀತಿಯ ಯೋಜನೆ ಇದೇ ಮೊದಲನೆಯದು. ಗಂಡ ಹೆಂಡತಿ ಮತ್ತು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಒಳಗೊಂಡಿರುವ ಹಾಗೂ ಅವರ ಹೊರತಾಗಿಯೂ ಕೃಷಿಗೆ ಸಂಬಂಧಿಸಿದ ದಾಖಲೆಗಳಲ್ಲಿ ಬೇರೆ ಯಾವುದೇ ವ್ಯಕ್ತಿಯ ಹೆಸರನ್ನು ಸೇರಿಸಿದ್ದರೆ ಅವರಿಗೂ ಸಹ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಮೂಲಕ 6,000 ರೂ. ವಾರ್ಷಿಕವಾಗಿ ನೀಡಲಾಗುತ್ತದೆ.

ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಇತರೆ ಷರತ್ತುಗಳು:

ಕೃಷಿ ಯೋಜನೆಯ ದಾಖಲೆಗಳ ಜೊತೆಗೆ ಈ ಯೋಜನೆಯ ಲಾಭ ಪಡೆಯಲು ಬಯಸುವ ವ್ಯಕ್ತಿಗೆ ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಆಧಾರ್ ಸಂಖ್ಯೆ ಕಡ್ಡಾಯವಾಗಿದೆ. ಸಂಬಂಧಪಟ್ಟ ರಾಜ್ಯ ಸರ್ಕಾರ ಮೊದಲು ಈ ದಾಖಲೆಗಳನ್ನು ಪರಿಶೀಲಿಸುತ್ತದೆ, ನಂತರ ಕೇಂದ್ರ ಸರ್ಕಾರವು ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾಯಿಸುತ್ತದೆ.

ಫಲಾನುಭವಿ ರೈತರ ಸಂಖ್ಯೆ ಇನ್ನೂ 10 ಕೋಟಿಗೆ ತಲುಪಿಲ್ಲ;ಪಿಎಂ ಕಿಸಾನ್ ಯೋಜನೆಯ ಒಟ್ಟು ಬಜೆಟ್ 75 ಸಾವಿರ ಕೋಟಿ ರೂ. ಮತ್ತು ಮೋದಿ ಸರ್ಕಾರವು ವಾರ್ಷಿಕವಾಗಿ 14.4 ಕೋಟಿ ಜನರಿಗೆ ಹಣವನ್ನು ನೀಡಲು ಯೋಜನೆ ರೂಪಿಸಿದೆ. ಆದರೆ, ಈ ಸಂಖ್ಯೆ ಈವರೆಗೆ 10 ಕೋಟಿಗಳಿಗೆ ತಲುಪಿಲ್ಲ.

ಒಟ್ಟು ಫಲಾನುಭವಿಗಳು ಕೇವಲ 9.65 ಕೋಟಿಗಳು ಮತ್ತು 17 ತಿಂಗಳ ಹಿಂದೆ ಈ ಯೋಜನೆಯನ್ನು ಪ್ರಾರಂಭಿಸಿದ್ದಾಗ ಪರಿಸ್ಥಿತಿ ಭಿನ್ನವಾಗಿತ್ತು. ಅನಿವಾರ್ಯ ಕಾರಣಗಳಿಂದಾಗಿ ಹಲವಾರು ರೈತರು ಈ ಯೋಜನೆಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿರಲಿಲ್ಲ. ಆದರೆ, ಇದೀಗ ನಗರ ಭಾಗದಿಂದ ವಲಸೆ ಕಾರ್ಮಿಕರು ಮತ್ತೆ ತಮ್ಮ ಹಳ್ಳಿಗಳಿಗೆ ಹಿಂದಿರುಗುತ್ತಿದ್ದು ಅವರಿಗೆ ಈ ಯೋಜನೆ ಹೆಚ್ಚು ಉಪಯೋಗವಾಗಲಿದೆ ಎಂದು ಹೇಳಲಾಗುತ್ತಿದೆ.

ಹೆಚ್ಚಿನ ಸಂಖ್ಯೆಯ ವಲಸಿಗರು ಕೃಷಿ ಕೆಲಸಕ್ಕೆ ಆದ್ಯತೆ ನೀಡುತ್ತಿದ್ದಾರೆ: ರೈತ ಸಂಘಟನೆಗಳು
ವಲಸೆ ಕಾರ್ಮಿಕರಲ್ಲಿ ಹೆಚ್ಚಿನವರು ಕೃಷಿ ಸಂಬಂಧಿತ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಬಯಸುತ್ತಾರೆ, ಇಲ್ಲದಿದ್ದರೆ ನರೇಗಾ ಯೋಜನೆಯ ಅಡಿಯಲ್ಲಿ ಎಲ್ಲೋ ಒಂದು ಕಡೆ ಕೆಲಸ ಮಾಡಲು ಇಚ್ಚಿಸುತ್ತಿದ್ದಾರೆ ಎಂದು ರಾಷ್ಟ್ರೀಯ ರೈತ ಒಕ್ಕೂಟದ (ರಾಷ್ಟ್ರೀಯ ಕಿಸಾನ್ ಮಹಾಸಂಗ) ಸ್ಥಾಪಕ ಸದಸ್ಯ ವಿನೋದ್ ಆನಂದ್ ಅಭಿಪ್ರಾಯಪಟ್ಟಿದ್ದಾರೆ.

ಇಂತಹ ಪರಿಸ್ಥಿತಿಗಳಲ್ಲಿ, ಕೃಷಿ ಭೂಮಿಯನ್ನು ಹೊಂದಿರುವವರು, ವಾರ್ಷಿಕವಾಗಿ 6000 ರೂಗಳನ್ನು ಪಡೆಯಲು ಕಿಸಾನ್ ಸಮ್ಮನ್ ನಿಧಿಗೆ ನೋಂದಾಯಿಸಿ ಕೊಳ್ಳಬಹುದು. ಈ ಮೊತ್ತವನ್ನು ಇನ್ನೂ ಸ್ವಲ್ಪ ಹೆಚ್ಚಿಸಲು ರೈತ ಸಂಘಗಳು ಮತ್ತು ಕೃಷಿ ವಿಜ್ಞಾನಿಗಳು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಹಳ್ಳಿಗಳಲ್ಲಿನ ಪರಿಸ್ಥಿತಿಗಳನ್ನು ಸುಧಾರಿಸಲು ನರೇಗಾ ಬಜೆಟ್ ಹೆಚ್ಚಳ:

2006 ರಲ್ಲಿ ನರೇಗಾ ಯೋಜನೆ ಪ್ರಾರಂಭವಾದ ನಂತರ ಈ ಯೋಜನೆಯ ಬಜೆಟ್ ಅನ್ನುಒಂದು ಲಕ್ಷ ಕೋಟಿಗೆ ಏರಿಸಲಾಗಿದೆ. ಕೊರೋನಾ ಬಿಕ್ಕಟ್ಟಿನ ದೃಷ್ಟಿಯಿಂದ ಮೋದಿ ಸರ್ಕಾರ ಈ ಬಜೆಟ್ ಅನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ. ಈ ಮೂಲಕ ಹಳ್ಳಿಗಳಲ್ಲಿ ಗರಿಷ್ಠ ಉದ್ಯೋಗಗ:ಳನ್ನು ಸೃಷ್ಟಿಸಬಹುದು.

2020-21ರಲ್ಲಿ ರೂ. 1,01,500 ಕೋಟಿ ರೂ.ಗಳನ್ನು ನರೇಗಾ ಯೋಜನೆಯ ಅಡಿಯಲ್ಲಿ ಖರ್ಚು ಮಾಡಲು ಉದ್ದೇಶಿಸಲಾಗಿದೆ. ಕಳೆದ ವರ್ಷ ಈ ಯೋಜನೆಗೆ 71,000 ಕೋಟಿ ರೂ ಖರ್ಚು ಮಾಡಲಾಗಿತ್ತು. 2020-21ನೇ ಸಾಲಿನ ಬಜೆಟ್ ಘೋಷಿಸಿದಾಗ ಸರ್ಕಾರ ನರೇಗಾ ಯೋಜನೆಗೆ 61,500 ಕೋಟಿ ರೂ ಬಜೆಟ್ ಘೋಷಿಸಿತ್ತು. ಆದರೆ, ಈಗ ಈ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Comments are closed.