ರಾಷ್ಟ್ರೀಯ

6 ತಿಂಗಳ ಇಎಂಐ ಮುಂದೂಡಿಕೆ ಅವಧಿಯ ಬಡ್ಡಿ ಮನ್ನಾಕ್ಕೆ ಆಗ್ರಹ; ಸುಪ್ರೀಂನಿಂದ ನೋಟಿಸ್‌

Pinterest LinkedIn Tumblr

ಹೊಸದಿಲ್ಲಿ: ಇಎಂಐ ಮುಂದೂಡಿಕೆಯ ಅವಧಿಯಲ್ಲಿ ಬಡ್ಡಿ ದರ ವಿಧಿಸುವ ಬ್ಯಾಂಕ್‌ಗಳ ನಿರ್ಧಾರ ಪ್ರಶ್ನಿಸಿದ್ದ ಅರ್ಜಿ ಸಂಬಂಧ, ಕೇಂದ್ರ ಸರಕಾರ ಹಾಗೂ ಆರ್‌ಬಿಐಗೆ ಸುಪ್ರೀಂ ಕೋರ್ಟ್‌ ಮಂಗಳವಾರ ನೋಟಿಸ್‌ ನೀಡಿದೆ. ಬ್ಯಾಂಕ್‌ಗಳ ನಿರ್ಧಾರ ಪ್ರಶ್ನಿಸಿರುವ ಅರ್ಜಿದಾರರು ಇಎಂಐ ಮುಂದೂಡಿಕೆ ಅವಧಿಯಲ್ಲಿ ಬಡ್ಡಿ ಮನ್ನಾಕ್ಕೆ ಒತ್ತಾಯಿಸಿದ್ದಾರೆ.

ಉತ್ತರ ಪ್ರದೇಶದ ನಿವಾಸಿ ಗಜೇಂದ್ರ ಶರ್ಮಾ ಅವರ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡಿರುವ ಸುಪ್ರೀಂ ಕೋರ್ಟ್‌, ಕೇಂದ್ರ ಮತ್ತು ಆರ್‌ಬಿಐನಿಂದ ವಿವರಣೆ ಕೇಳಿದೆ. ಮುಂದಿನ ವಾರ ವಿಚಾರಣೆ ನಡೆಸುವುದಾಗಿ ಹೇಳಿದೆ.

ಐಸಿಐಸಿಐ ಬ್ಯಾಂಕ್‌ನಲ್ಲಿ ಶರ್ಮಾ ಅವರು 37 ಲಕ್ಷ ರೂ.ಗೂ ಅಧಿಕ ಮೊತ್ತದ ಸಾಲವನ್ನು ಪಡೆದಿದ್ದು, ಅವರು ಆಗ್ರಾದಲ್ಲಿ ಕನ್ನಡಕದ ಅಂಗಡಿ ನಡೆಸುತ್ತಿದ್ದಾರೆ. “ಲಾಕ್‌ಡೌನ್‌ನಿಂದಾಗಿ ಜೀವನ ನಡೆಸುವುದೇ ಕಷ್ಟವಾಗಿದೆ. ಸಾಲ ತೀರಿಸುವುದು ಹೇಗೆ? ಕಳೆದ ಎರಡು ತಿಂಗಳಿಂದ ದುಡಿಮೆಯೇ ಇಲ್ಲ. ಸಾಲದ ಇಎಂಐ ಮುಂದೂಡಲು ಅವಕಾಶ ನೀಡಲಾಗಿದೆ ಸರಿ. ಆದರೆ, ಬಡ್ಡಿ ಬೆಳೆಯುವ ಕಾರಣ ಆರ್‌ಬಿಐನ ಉದ್ದೇಶ ಈಡೇರಿದಂತೆ ಆಗುವುದಿಲ್ಲ. ಬಡ್ಡಿ ಮುಂದುವರಿಕೆಯ ಪರಿಣಾಮ ಗ್ರಾಹಕರ ಮೇಲಿನ ಸಾಲದ ಹೊರೆ ಹೆಚ್ಚಲಿದೆ,’’ ಎಂದು ದೂರಿನಲ್ಲಿ ಶರ್ಮಾ ಹೇಳಿದ್ದಾರೆ. ಕಳೆದ ಏಪ್ರಿಲ್‌ನಲ್ಲಿ ಇಂಥದ್ದೇ ಅರ್ಜಿಯನ್ನು ತಳ್ಳಿ ಹಾಕಿದ್ದ ಸುಪ್ರೀಂ ಕೋರ್ಟ್‌, ಈಗ ಶರ್ಮಾ ಪ್ರಕರಣವನ್ನು ವಿಚಾರಣೆಗೆ ಎತ್ತಿಕೊಂಡಿದೆ.

ಗೃಹ, ವಾಹನ ಸೇರಿದಂತೆ ಎಲ್ಲಅವಧಿ ಸಾಲಗಳ ಇಎಂಐ ಪಾವತಿಯನ್ನು 3 ತಿಂಗಳು ಮುಂದೂಡುವ ಅವಕಾಶ ನೀಡುವುದಾಗಿ ಆರ್‌ಬಿಐ ಮಾ.27ರಂದು ಘೋಷಿಸಿತ್ತು. ಮತ್ತೆ 3 ತಿಂಗಳ ಮುಂದೂಡುವಿಕೆ ಅವಕಾಶವನ್ನು ಇತ್ತೀಚೆಗಷ್ಟೇ ವಿಸ್ತರಿಸಿದೆ. ಕೋವಿಡ್‌ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇಎಂಐ ಮುಂಡೂಡುವಿಕೆಗೆ ಒಟ್ಟು 6 ತಿಂಗಳ (ಮಾರ್ಚ್‌-ಆಗಸ್ಟ್‌) ಅವಕಾಶವಿದ್ದರೂ, ಈ ಅವಧಿಯಲ್ಲಿ ಬಡ್ಡಿ ಬೆಳೆಯುತ್ತಲೇ ಹೋಗುತ್ತದೆ. ಬಡ್ಡಿ ಮನ್ನಾ ಮಾಡಬೇಕು ಎನ್ನುವ ಒತ್ತಾಯಗಳೂ ಇವೆ.

Comments are closed.