ರಾಷ್ಟ್ರೀಯ

ಮದುವೆಯಾಗುವುದಾಗಿ ಭರವಸೆ ನೀಡಿ ಲೈಂಗಿಕ ಸಂಪರ್ಕ ಅತ್ಯಾಚಾರವಲ್ಲ: ಹೈಕೋರ್ಟ್‌

Pinterest LinkedIn Tumblr


ಕಟಕ್ (ಒಡಿಶಾ)‌: ಮದುವೆಯಾಗುವ ಭರವಸೆಯ ಮೇರೆಗೆ ಪರಸ್ಪರ ಒಪ್ಪಿಗೆಯಿಂದ ನಡೆಸುವ ಲೈಂಗಿಕತೆಯು ಅತ್ಯಾಚಾರವೆನಿಸುವುದಿಲ್ಲ ಎಂದು ಒಡಿಶಾ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ಇದೇ ವೇಳೆ, ಮಹಿಳೆಯು ಸ್ವತಃ ಆಯ್ಕೆಯಿಂದ ಪುರುಷನೊಂದಿಗೆ ಸಂಬಂಧ ಬೆಳೆಸುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಅತ್ಯಾಚಾರ ಕಾನೂನಿಗೆ ತಿದ್ದುಪಡಿ ತರುವ ಅಗತ್ಯದ ಬಗ್ಗೆಯೂ ನ್ಯಾಯಾಲಯ ಪ್ರಸ್ತಾಪಿಸಿದೆ.

”ಐಪಿಸಿ 376ನೇ ಸೆಕ್ಷನ್‌ ಪ್ರಕಾರ, ಯುವಕ-ಯುವತಿ ನಡುವೆ ಯಾವುದೇ ಭರವಸೆ ಅಥವಾ ಆಶ್ವಾಸನೆ ಇಲ್ಲದೆಯೂ ಒಪ್ಪಿತ ಸಂಬಂಧವಿದ್ದಲ್ಲಿ ಅದನ್ನು ಅತ್ಯಾಚಾರ ಎಂದು ಪರಿಗಣಿಸಲಾಗದು” ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.

ಒಡಿಶಾದ ಕೋರತ್‌ಪುರ ಜಿಲ್ಲೆಯಲ್ಲಿ ಯುವಕನೊಬ್ಬನ ವಿರುದ್ಧ ಅದೇ ಗ್ರಾಮದ 19 ವರ್ಷದ ಯುವತಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದಳು. ಇದರ ಆಧಾರದ ಮೇಲೆ ಕಳೆದ ನವೆಂಬರ್‌ನಲ್ಲಿ ಯುವಕನನ್ನು ಬಂಧಿಸಲಾಗಿತ್ತು. ಯುವಕನಿಗೆ ಜಾಮೀನು ನೀಡಲು ಅಧೀನ ನ್ಯಾಯಾಲಯ ನಿರಾಕರಿಸಿದ ಹಿನ್ನೆಲೆಯಲ್ಲಿ, ಪ್ರಕರಣ ಹೈಕೋರ್ಟ್‌ ಮೆಟ್ಟಿಲೇರಿತ್ತು. ಅತ್ಯಾಚಾರ ಆರೋಪ ಎದುರಿಸುತ್ತಿರುವ ಯುವಕನಿಗೆ ಜಾಮೀನು ನೀಡಿರುವ ನ್ಯಾಯಮೂರ್ತಿ ಎಸ್‌.ಕೆ ಪಾಣಿಗ್ರಹಣಿ ಅವರು, ಅಧೀನ ನ್ಯಾಯಾಲಯದ ತೀರ್ಪನ್ನು ವಜಾಗೊಳಿಸಿದ್ದಾರೆ.

ದಾಖಲೆಗಳ ಪ್ರಕಾರ ದೂರುದಾರ ಯುವತಿಯು, ಬಂಧಿತ ಯುವಕನ ಜತೆ ನಾಲ್ಕು ವರ್ಷದಿಂದ ದೈಹಿಕ ಸಂಪರ್ಕ ಬೆಳೆಸಿದ್ದಳು. ಈ ಅವಧಿಯಲ್ಲಿ ಎರಡು ಬಾರಿ ಆಕೆ ಗರ್ಭವತಿಯಾಗಿದ್ದಳು. ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ಯುವಕ ತನ್ನೊಟ್ಟಿಗೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ ಎಂದು ಯುವತಿ ದೂರಿದ್ದಳು. ಅಷ್ಟೇ ಅಲ್ಲ, ಯುವಕನು ಮಾತ್ರೆಗಳನ್ನು ಸೇವಿಸಿ ಗರ್ಭಪಾತಕ್ಕೆ ಒಳಗಾಗಲು ಬಲವಂತ ಪಡಿಸಿದ್ದ ಎಂದು ಯುವತಿ ಆರೋಪಿಸಿದ್ದಾಳೆ.

Comments are closed.