ರಾಷ್ಟ್ರೀಯ

ಜಿಯೋದಲ್ಲಿ ಮತ್ತೊಂದು ಕಂಪನಿ 11,367 ಕೋಟಿ ಬಂಡವಾಳ ಹೂಡಿಕೆ

Pinterest LinkedIn Tumblr


ನವದೆಹಲಿ(ಮೇ 22): ಸಾಲಮುಕ್ತವಾಗುವ ಗುರಿಯಿರುವ ರಿಲಾಯನ್ಸ್ ಜಿಯೋ ಸಂಸ್ಥೆ ಆ ನಿಟ್ಟಿನಲ್ಲಿ ಮತ್ತೊಂದು ಗಮನಾರ್ಹ ಹೆಜ್ಜೆ ಇಟ್ಟಿದೆ. ಫೇಸ್​ಬುಕ್ ಸೇರಿದಂತೆ ನಾಲ್ಕು ಪ್ರಮುಖ ಕಂಪನಿಗಳಿಂದ ಹೂಡಿಕೆ ಆಕರ್ಷಿಸಿದ್ದ ರಿಲಾಯನ್ಸ್ ಇಂಡಸ್ಟ್ರೀಸ್ ಇದೀಗ ಕೆಕೆಆರ್ ಇನ್ವೆಸ್ಟ್​​ಮೆಂಟ್ ಕಂಪನಿಯ ಬಂಡವಾಳ ಸೆಳೆದಿದೆ. ಅಮೆರಿಕ ಮೂಲದ ಕೆಕೆಆರ್ ಇದೀಗ ಜಿಯೋದಲ್ಲಿ ಶೇ. 2.32ರಷ್ಟು ಪಾಲು ಖರೀದಿಸಲಿದೆ. ಅಂದರೆ, ವಿವಿಧ ಜಿಯೋ ಪ್ಲಾಟ್​ಫಾರ್ಮ್​ಗಳಲ್ಲಿ ಸುಮಾರು 11,367 ಕೋಟಿ ರೂ ಬಂಡವಾಳ ಹೂಡಲಿದೆ.

ಈ ಮುಂಚೆ ಫೇಸ್​ಬುಕ್, ಸಿಲ್ವರ್ ಲೇಕ್ ಪಾರ್ಟ್ನರ್ಸ್, ವಿಸ್ಟಾ ಈಕ್ವಿಟಿ ಪಾರ್ಟ್ನರ್ಸ್, ಜನರಲ್ ಅಟ್ಲಾಂಟಿಕ್ ಸಂಸ್ಥೆಗಳು ಜಿಯೋದಲ್ಲಿ ಹೂಡಿಕೆ ಮಾಡಲು ನಿರ್ಧರಿಸಿವೆ. ಈಗ ಈ ಪಟ್ಟಿಗೆ ಕೆಕೆಆರ್ ಸೇರ್ಪಡೆಯಾಗಿದೆ. ಈ ಐದು ಕಂಪನಿಗಳಿಂದ ಜಿಯೋಗೆ ಬರೋಬ್ಬರಿ 78,562 ಕೊಟಿ ರೂ ಹರಿದುಬರಲಿದೆ.

ರಿಲಾಯನ್ಸ್ ಜಿಯೋ ಸಂಸ್ಥೆ ಇದೀಗ ಸಾಲಮುಕ್ತವಾಗುವತ್ತ ದೃಢ ಹೆಜ್ಜೆ ಇಟ್ಟಿದೆ. ಈ ಹಣಕಾಸು ವರ್ಷಾಂತ್ಯದಲ್ಲಿ ಜಿಯೋಗೆ 1.61 ಲಕ್ಷ ಕೋಟಿ ಸಾಲ ಇತ್ತು. ತನ್ನ ಷೇರುಗಳ ರೈಟ್ ಇಷ್ಯೂ ಮೂಲಕ ಜಿಯೋ 53,215 ಕೋಟಿ ರೂ ಬಂಡವಾಳ ಆಕರ್ಷಿಸುತ್ತಿದೆ. ಇವೆಲ್ಲವುಗಳಿಂದ ಜಿಯೋಗೆ ಸುಮಾರು 1.2 ಲಕ್ಷ ಕೋಟಿ ರೂ ಬಂಡವಾಳ ಹರಿದುಬರುವ ನಿರೀಕ್ಷೆ ಇದೆ.

1976ರಲ್ಲಿ ಸ್ಥಾಪನೆಗೊಂಡ ಅಮೆರಿಕದ ಕೆಕೆಆರ್ ಸಂಸ್ಥೆ ವಿಶ್ವದ ಅನೇಕ ಪ್ರಮುಖ ಕಂಪನಿಗಳಿಗೆ ಬಂಡವಾಳ ಹಾಕಿ ನೆರವು ನೀಡುತ್ತಾ ಬಂದಿದೆ. ವಿಶ್ವದ ವಿವಿಧ ತಂತ್ರಜ್ಞಾನ ಸಂಸ್ಥೆಗಳಲ್ಲಿ ಕೆಕೆಆರ್ ಈವರೆಗೆ 30 ಬಿಲಿಯನ್ ಡಾಲರ್ ಹಣ ಹೂಡಿಕೆ ಮಾಡಿದೆ. ಬಿಎಂಸಿ ಸಾಫ್ಟ್​ವೇರ್, ಬೈಟ್​ಡ್ಯಾನ್ಸ್ ಮೊದಲಾದ ಕಂಪನಿಗಳು ಕೆಕೆಆರ್​ನ ಹೂಡಿಕೆಯ ಲಾಭ ಪಡೆದಿವೆ. ಅಂದಹಾಗೆ, ಏಷ್ಯಾದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಕೆಕೆಆರ್ ಹೂಡಿಕೆ ಮಾಡಿರುವುದು ಇದೆ ಮೊದಲು.

ಇದೇ ವೇಳೆ, ಜಿಯೋದಲ್ಲಿ ಕೆಕೆಆರ್ ಹೂಡಿಕೆ ಮಾಡುವ ನಿರ್ಧಾರಕ್ಕೆ ಆರ್​ಐಎಲ್ ಛೇರ್ಮನ್ ಮುಕೇಶ್ ಅಂಬಾನಿ ಸಂತಸ ವ್ಯಕ್ತಪಡಿಸಿದ್ದಾರೆ.

Comments are closed.