ರಾಷ್ಟ್ರೀಯ

ಶಾಸಕನ ಅದ್ಧೂರಿ ಜನ್ಮದಿನ ಆಚರಣೆ: ಹೈಕೋರ್ಟ್‌ನಿಂದ ನೋಟಿಸ್‌

Pinterest LinkedIn Tumblr


ಹೈದರಾಬಾದ್:‌ ಲಾಕ್‌ಡೌನ್‌ ಸಂದರ್ಭದಲ್ಲಿ ಅದ್ಧೂರಿಯಾಗಿ ಜನ್ಮದಿನ ಆಚರಿಸಿಕೊಂಡಿದ್ದ ನಾರಾಯಣಖೇಡದ ಟಿಆರ್‌ಎಸ್‌ ಶಾಸಕ ಎಂ.ಭೂಪಾಲ್‌ ರೆಡ್ಡಿಗೆ ತೆಲಂಗಾಣ ಹೈಕೋರ್ಟ್‌ ಗುರುವಾರ ನೋಟಿಸ್‌‌ ಜಾರಿಗೊಳಿಸಿದ್ದು, ಘಟನೆಯ ಕುರಿತು ಅವರ ನಿಲುವನ್ನು ವಿವರಿಸುವಂತೆ ಸೂಚಿಸಿದೆ. ಪ್ರತಿಕ್ರಿಯೆಗಾಗಿ ಮೂರು ವಾರಗಳ ಸಮಯ ನೀಡಿದ್ದು, ವಿಚಾರಣೆ ಮುಂದೂಡಿದೆ.

ಮೇ 7ರಂದು ಶಾಸಕರ ನಿವಾಸದಲ್ಲಿ ಅದ್ಧೂರಿ ಜನ್ಮದಿನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಲಾಕ್‌ಡೌನ್‌ ನಿಯಮ ಉಲ್ಲಂಘನೆಯಾಗಿರುವುದು ಸ್ಪಷ್ಟವಾಗಿದ್ದು, ಬಹಳಷ್ಟು ಜನ ಕಾರ್ಯಕ್ರಮದಲ್ಲಿ ಸೇರಿದ್ದರು. ಈ ಬಗ್ಗೆ ತೆಲಂಗಾಣ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು.

ಗುರುವಾರ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ ಶಾಸಕನಿಗಷ್ಟೇ ಅಲ್ಲದೇ ತೆಲಂಗಾಣ ಸರಕಾರ, ಸಂಗಾರೆಡ್ಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೂ ನೋಟಿಸ್‌‌ ಜಾರಿಗೊಳಿಸಲಾಗಿದೆ. ಸಾಮಾಜಿಕ ಕಾರ್ಯಕರ್ತ ಎಂ.ವಿಠಲ್‌ ಶಾಸಕನ ನಡೆ ವಿರುದ್ಧ ಪಿಐಎಲ್‌ ಸಲ್ಲಿಸಿದ್ದರು.

ಮುಖ್ಯ ನ್ಯಾಯಾಧೀಶ ರಾಘವೇಂದ್ರ ಸಿಂಗ್‌ ಚೌಹಾಣ್‌ ಹಾಗೂ ನ್ಯಾಯಮೂರ್ತಿ ಬಿ.ವಿಜಯಸೇನ್‌ ರೆಡ್ಡಿ ಅವರಿದ್ದ ಪೀಠಕ್ಕೆ ಅರ್ಜಿದಾರರ ಪರ ವಕೀಲ ಡಿ.ರಾಘವೆಂದ್ರ ರಾವ್‌, ಸಂಗಾರೆಡ್ಡಿ ಜಿಲ್ಲೆ ಕಿತ್ತಳೆ ವಲಯಕ್ಕೆ ಜಾರಿದ್ದು, ಕಾರ್ಯಕ್ರಮಗಳಲ್ಲಿ 20ಕ್ಕಿಂತ ಹೆಚ್ಚಿನ ಜನ ಭಾಗವಹಿಸುವಂತಿದ್ದಿಲ್ಲ. ಆದರೆ, ಶಾಸಕ ತಮ್ಮ 61ನೇ ಜನ್ಮದಿನವನ್ನು ಆಚರಿಸಿಕೊಂಡಿದ್ದು, 500ಕ್ಕಿಂತ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಹಳಷ್ಟು ಜನ ಯಾವುದೇ ಮಾಸ್ಕ್‌ಗಳನ್ನು ಧರಿಸಿದ್ದಿಲ್ಲ ಎಂದು ವಿಠಲ್‌ ಹೇಳಿದ್ದಾರೆ. ಲಾಕ್‌ಡೌನ್‌ ನಿಯಮ ಉಲ್ಲಂಘಿಸಿದರೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯಿದೆ 51 (ಬಿ)ಯಂತೆ ಒಂದು ವರ್ಷದ ಜೈಲು ಶಿಕ್ಷೆ ಅಥವಾ ಅಂತಹ ಕಾರ್ಯಕ್ರಮದಲ್ಲಿ ಯಾವುದಾದರೂ ಸಾವು ಸಂಭವಿಸಿದರೆ 2 ವರ್ಷಕ್ಕೆ ಶಿಕ್ಷೆ ವಿಸ್ತರಿಸಬಹುದು.

Comments are closed.