ರಾಷ್ಟ್ರೀಯ

ತೆಲಂಗಾಣದ ಒಂದೇ ಬಾವಿಯಲ್ಲಿ 9 ಜನರ ಶವ ಪತ್ತೆ

Pinterest LinkedIn Tumblr


ಹೈದರಾಬಾದ್‌: ತೆಲಂಗಾಣದ ವಾರಂಗಲ್ ನಗರದ ಸಮೀಪದ ಗ್ರಾಮವೊಂದರ ಬಾವಿಯೊಂದರಲ್ಲಿ 9 ಜನರ ಶವ ಪತ್ತೆಯಾಗಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. 9 ಜನರ ಪೈಕಿ 8 ಜನರು ವಲಸೆ ಕಾರ್ಮಿಕರು ಎಂದು ಪೊಲೀಸರು ತಿಳಿಸಿದ್ದಾರೆ. ವಾರಂಗಲ್‌ ಜಿಲ್ಲೆಯ ಗೊರ್ರೆಕುಂಟಾ ಗ್ರಾಮದಲ್ಲಿ ಘಟನೆ ನಡೆದಿದ್ದು, ಒಂದೇ ಬಾವಿಯಿಂದ 9 ಶವಗಳನ್ನು ಪೊಲೀಸರು ಹೊರತೆಗೆದಿದ್ದಾರೆ. ಗುರುವಾರ 4 ಮೃತದೇಹಗಳನ್ನು ಹೊರತೆಗೆದಿದ್ದ ಪೊಲೀಸರು, ಶುಕ್ರವಾರ ಮತ್ತೆ 5 ಶವಗಳನ್ನು ಹೊರತೆಗೆದಿದ್ದಾರೆ.

ಪಶ್ಚಿಮ ಬಂಗಾಳದ ವಲಸೆ ಕಾರ್ಮಿಕ ಕುಟುಂಬದ 6 ಜನ, ಬಿಹಾರದ ಇಬ್ಬರು ಕಾರ್ಮಿಕರು ಹಾಗೂ ಸ್ಥಳೀಯ ನಾಗರೀಕರೊಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ವಾರಂಗಲ್‌ನ ಗನ್ನಿ ಬ್ಯಾಗ್‌ ಹೊಲಿಗೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಕ್ಸೂದ್ (56), ಆತನ ಪತ್ನಿ ನಿಶಾ (48), ಪುತ್ರಿ ಬುಶ್ರಾ (24) ಮತ್ತು 3 ವರ್ಷದ ಅವರ ಮೊಮ್ಮಗ ಎಂದು ಗುರುತಿಸಿದ್ದು, ಇವರ ಮೃತದೇಹಗಳನ್ನು ಗುರುವಾರ ಬಾವಿಯಿಂದ ಹೊರತೆಗೆಯಲಾಗಿತ್ತು.

ಶುಕ್ರವಾರ ಪೊಲೀಸರು ಮತ್ತೆ 5 ಶವಗಳನ್ನು ಹೊರತೆಗೆದಿದ್ದು, ಮಸ್ಕೂದ್‌ ಮಗ, ಬಿಹಾರದ ಇಬ್ಬರು ಕಾರ್ಮಿಕರು ಹಾಗೂ ಸ್ಥಳೀಯ ನಿವಾಸಿಯೆಂದು ಹೇಳಿದ್ದಾರೆ. ಇದು ಸಾಮೂಹಿಕ ಆತ್ಮಹತ್ಯೆ ಅಥವಾ ಸಾಮೂಹಿಕ ಕೊಲೆ ಎಂದು ಪೊಲೀಸರು ಮೇಲ್ನೋಟಕ್ಕೆ ಅನುಮಾನ ವ್ಯಕ್ತಪಡಿಸುತ್ತಿದ್ದರೂ, ಸಾವಿನ ಹಿಂದಿನ ಕಾರಣ ತಿಳಿದು ಬಂದಿಲ್ಲ.

ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ ವಹಿಸಲಾಗಿದೆ ಎಂದು ವಾರಂಗಲ್‌ ಪೊಲೀಸ್‌ ಆಯುಕ್ತ ವಿ.ರವಿಚಂದರ್‌ ಹೇಳಿದ್ದು, ಮೃತದೇಹಗಳ ಮೇಲೆ ಯಾವುದೇ ಬಾಹ್ಯ ಗಾಯಗಳಾಗಿಲ್ಲ. ಮರಣೋತ್ತರ ಪರೀಕ್ಷೆಯ ನಂತರ ಸಾವಿನ ಕಾರಣ ತಿಳಿಯಲಿದ್ದು, ವರದಿಯ ಬಳಿಕ ಮುಂದಿನ ತನಿಖಾ ಹಂತ ನಿರ್ಧರಿಸಲಾಗುತ್ತದೆ ಎಂದು ಹೇಳಿದ್ದಾರೆ.

ಗೀಸುಕೊಂಡಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಮಹಾತ್ಮಾ ಗಾಂಧಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಶ್ವಾನದಳ ಮತ್ತಿತರ ತಂಡಗಳು ಆಗಮಿಸಿ ಸಾಕ್ಷ್ಯಗಳನ್ನು ಕಲೆಹಾಕುತ್ತಿವೆ.

ವಾರಂಗಲ್‌ನ ಕರೀಮಬಾದ್‌ನಲ್ಲಿ ಮಕ್ಸೂದ್‌ ಕಳೆದ 20 ವರ್ಷಗಳಿಂದ ನೆಲೆಸಿದ್ದ. ಲಾಕ್‌ಡೌನ್‌ನಿಂದಾಗಿ ಕೆಲಸ ಇಲ್ಲದ್ದರಿಂದ ಮಕ್ಸೂದ್‌ ಕೆಲಸ ಮಾಡುತ್ತಿದ್ದ ಸಂಸ್ಥೆಯ ಮಾಲೀಕ ಕುಟುಂಬಕ್ಕೆ ತಮ್ಮ ಶೆಲ್ಟರ್‌ನಲ್ಲಿ ತಂಗಲು ಹೇಳಿದ್ದರು. ಹೀಗಾಗಿ ಮಾಲೀಕನ ಗೋಡೌನ್‌ನಲ್ಲಿ ಇಡೀ ಕುಟುಂಬ ತಂಗಿತ್ತು. ಇದೇ ಗೋಡೌನ್ ಬಳಿಯ ಬಾವಿಯಲ್ಲಿ ಮೃತ ದೇಹಗಳು ಪತ್ತೆಯಾಗಿವೆ.

Comments are closed.