ರಾಷ್ಟ್ರೀಯ

ಕೇರಳದ ತಿರುವನಂತಪುರದಿಂದ ಹೆಲಿಕಾಪ್ಟರ್ ನೆರವಿನಿಂದ ಕೊಚ್ಚಿಗೆ ಜೀವಂತ ಹೃದಯ ರವಾನೆ

Pinterest LinkedIn Tumblr


ಕೊಚ್ಚಿ: ಕೊರೊನಾ ವೈರಸ್ ಲಾಕ್‌ಡೌನ್‌ನಿಂದಾಗಿ ಸಾರಿಗೆ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಈ ಮಧ್ಯೆ ಕೇರಳ ರಾಜಧಾನಿ ತಿರುವನಂತಪುರದಿಂದ ಕೊಚ್ಚಿಗೆ ಹೆಲಿಕಾಪ್ಟರ್‌ ಮೂಲಕ ಜೀವಂತ ಹೃದಯವನ್ನು ಯಶಸ್ವಿಯಾಗಿ ರವಾನಿಸಲಾಗಿದೆ.

ಹೃದಯ ಕಸಿ ಶಸ್ತ್ರಚಿಕಿತ್ಸೆಗಾಗಿ ಜೀವಂತ ಹೃದಯವನ್ನು ಸಾಗಿಸಲಾಗಿದೆ. ಇದೇ ಮೊದಲ ಬಾರಿಗೆ ಕೇರಳ ಪೊಲೀಸ್, ತನ್ನ ಬಾಡಿಗೆ ಹೆಲಿಕಾಪ್ಟರ್ ಅನ್ನು ಪ್ರಾಣ ಉಳಿಸುವ ಮಹತ್ ಕಾರ್ಯಕ್ಕಾಗಿ ಬಳಸಿಕೊಂಡಿದೆ.

ಕೊಚ್ಚಿಯಲ್ಲಿ ಚಿಕಿತ್ಸೆಯಲ್ಲಿರುವ ರೋಗಿಯೊಬ್ಬರ ತುರ್ತು ಹೃದಯ ಕಸಿ ಶಸ್ತ್ರಚಿಕಿತ್ಸೆಗಾಗಿ ಹೃದಯವನ್ನು ತಿರುವನಂತಪುರದಿಂದ ಕೊಚ್ಚಿಗೆ ವಾಯು ಮಾರ್ಗದ ಮೂಲಕ ಸಾಗಿಸಲಾಗಿದೆ.

ಕೊರೊನಾ ವೈರಸ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಎಲ್ಲ ಜಿಲ್ಲೆಗಳ ಗಡಿ ಭಾಗಗಳಲ್ಲಿ ಸಂಚಾರಕ್ಕೆ ನಿಬಂರ್ಧಗಳಿವೆ. ಈ ಹಿನ್ನೆಲೆಯಲ್ಲಿ ಕೇರಳ ಪೊಲೀಸ್‌ನ ಬಾಡಿಗೆ ಹೆಲಿಕಾಪ್ಟರ್ ಸೇವೆಯನ್ನು ಬಳಸಿಕೊಳ್ಳಲು ಕೇರಳ ಸರಕಾರ ನಿರ್ಧರಿಸಿತು.

ಅಧಿಕಾರಿಗಳ ಪ್ರಕಾರ ತಿರುವನಂತಪುರಂನಲ್ಲಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ 50ರ ಹರೆಯದ ಮೆದುಳು ನಿಷ್ಕ್ರಿಯಗೊಂಡಿರುವ ಮಹಿಳೆಯ ಹೃದಯವನ್ನು ಕೊಚ್ಚಿಯ ಲಿಸ್ಸಿ ಆಸ್ಪತ್ರೆಯಲ್ಲಿ ದಾನಿಗಾಗಿ ಕಾಯುತ್ತಿರುವ ರೋಗಿಗೆ ಕಸಿ ಮಾಡಲಾಗುತ್ತಿದೆ.

ಹೃದಯವನ್ನು ಕಿಮ್ಸ್ ಆಸ್ಪತ್ರೆಯಿಂದ ಆ್ಯಂಬುಲೆನ್ಸ್ ಮಾರ್ಗವಾಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿಸಲಾಯಿತು. ಅಲ್ಲಿಂದ ಬಳಿಕ ಹೆಲಿಕಾಪ್ಟರ್‌ನಲ್ಲಿ ಕೊಚ್ಚಿಗೆ ತಲುಪಿಸಲಾಯಿತು. ಆಸ್ಪತ್ರೆ ಮೂಲಗಳ ಪ್ರಕಾರ ಇಂದೇ (ಶನಿವಾರ) ಹೃದಯ ಕಸಿ ಚಿಕಿತ್ಸೆ ನೆರವೇರಲಿದೆ.

ನಕ್ಸಲ್ ವಿರೋಧಿ ಹಾಗೂ ನೈಸರ್ಗಿಕ ವಿಪತ್ತುಗಳನ್ನು ಎದುರಿಸುವ ನಿಟ್ಟಿನಲ್ಲಿ ಕೇರಳ ಪೊಲೀಸ್ ಪವನ್ ಹ್ಯಾನ್ಸ್‌ನಿಂದ ಬಾಡಿಗೆಗೆ ಹೆಲಿಕಾಪ್ಟರ್‌ಗಳನ್ನು ಪಡೆದಿತ್ತು. ಇದರ ಬಾಡಿಗೆ ತಿಂಗಳಿಗೆ 1.44 ಕೋಟಿ ರೂ.ಗಳಾಗಿದೆ.

Comments are closed.