ರಾಷ್ಟ್ರೀಯ

ರಾಜಧಾನಿ ದೆಹಲಿಯಲ್ಲಿ ಜೂನ್, ಜುಲೈನಲ್ಲಿ ಹೆಚ್ಚಾಗಲಿದೆ ಕೊರೋನಾ ಹಾವಳಿ

Pinterest LinkedIn Tumblr


ನವದೆಹಲಿ(ಮೇ 08): ಜಾಗತಿಕ ಪಿಡುಗಾಗಿ ಪರಿಣಮಿಸಿರುವ ಕೊರೋನಾ ಮಹಾಮಾರಿ ಈಗಾಗಲೇ ರಾಷ್ಟ್ರ ರಾಜಧಾನಿ ದೆಹಲಿಯನ್ನು ಹಿಂಡಿ ಹಿಪ್ಪೆ ಮಾಡಿದೆ. ಈ ನಡುವೆ ದೆಹಲಿಯಲ್ಲಿ ಕೊರೊನಾ ಹಾವಳಿ ಇನ್ನೂ ಹೆಚ್ಚಾಗಲಿದೆ. ಜೂನ್ ಮತ್ತು ಜುಲೈ ತಿಂಗಳಲ್ಲಿ ತಾರಕಕ್ಕೇರಲಿದೆ ಎಂಬ ಬೆಚ್ಚಿ ಬೀಳಿಸುವ ಸುದ್ದಿಗಳು ಬರುತ್ತಿವೆ. ದೆಹಲಿಯಲ್ಲಿ ಈಗಾಗಲೇ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ದೇಶದಲ್ಲಿ ಅತಿಹೆಚ್ಚು ಕೊರೋನಾ ಪೀಡಿತರಿರುವ ರಾಜ್ಯಗಳ ಪೈಕಿ ಮಹಾರಾಷ್ಟ್ರ ಮತ್ತು ಗುಜರಾತ್ ಬಳಿಕ ದೆಹಲಿ 3ನೇ ಸ್ಥಾನದಲ್ಲಿದೆ.

ಇದರ ನಡುವೆ ಜೂನ್ ಮತ್ತು ಜುಲೈ ತಿಂಗಳಲ್ಲಿ ತಾರಕಕ್ಕೇರಲಿದೆ ಎಂಬ ಮಾಹಿತಿ ಕೇಳಿಬರುತ್ತಿದೆ. ಇದು, ‘ಬಿಸಿಲು ಜಾಸ್ತಿ ಆಗುತ್ತಿದ್ದಂತೆ ಕೊರೋನಾ ಕಮ್ಮಿ ಆಗಿಬಿಡುತ್ತದೆ’, ‘ಬಿಸಿ ನೀರು ಕುಡಿದರೆ ಕೊರೋನಾ ವೈರಸ್ ಗಂಟಲಲ್ಲೇ ಬಿಸಿಗೆ ಸುಟ್ಟುಹೋಗಿಬಿಡುತ್ತದೆ’, ‘ಗಂಗಾ ನದಿಗೆ ಕೊರೋನಾ ವೈರಸ್ ಅನ್ನು ಕೊಲ್ಲುವ ಶಕ್ತಿ ಇದೆ’ ಎಂಬಿತ್ಯಾದಿಯಾಗಿ ಹರಡಿದ ಗಾಳಿ ಸುದ್ದಿಗಳಲ್ಲೊಂದಲ್ಲ. ಈ‌ ಆತಂಕಕಾರಿ ಮಾಹಿತಿ ಬಿಚ್ಚಿಟ್ಟು ಬೆಚ್ಚಿ ಬೀಳಿಸಿದವರು ಡಾ. ಎಸ್.ಕೆ. ಸರೈನ್.

ಡಾ. ಎಸ್.ಕೆ. ಸರೈನ್ ಅವರು ಕೊರೊನಾ ವೈರಸ್ ರೆಸ್ಪಾನ್ಸ್ ಕಮಿಟಿಯ ಮುಖ್ಯಸ್ಥರು. ಏನೆಲ್ಲಾ ಕ್ರಮ ಕೈಗೊಂಡರೂ ಕೊರೋನಾ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಬಾರದೆ ನಿತ್ರಾಣವಾಗಿರುವ ದೆಹಲಿ ಸರ್ಕಾರ ‘ಮುಂದೇನು ಮಾಡಬೇಕೆಂಬ‌ ಶಿಫಾರಸು ‌ನೀಡಲು’ ದೆಹಲಿ ಸರ್ಕಾರ ಅಧಿಕೃತವಾಗಿ ರಚಿಸಿರುವ ಕೊರೊನಾ ವೈರಸ್ ರೆಸ್ಪಾನ್ಸ್ ಕಮಿಟಿಯನ್ನು ಮುನ್ನಡೆಸುತ್ತಿರುವವರು. ಡಾ. ಎಸ್.ಕೆ. ಸರೈನ್‌ ಅವರು ‘ಜೂನ್ ಮತ್ತು ಜುಲೈ ತಿಂಗಳಲ್ಲಿ ದೆಹಲಿಯಲ್ಲಿ ಏಕೆ ಕೊರೋನಾ ಸೋಂಕು ಹರಡುವಿಕೆ ತಾರಕ್ಕೇರಲಿದೆ? ಪೂರಕ ಮಾಹಿತಿಗಳು ಏನು ಎಂಬ ಬಗ್ಗೆ ಬಿಡಿಸಿ ಹೇಳಿದ್ದಾರೆ‌.

ದೆಹಲಿಯಲ್ಲಿ ನಿನ್ನೆ (ಮೇ 7) ಒಂದೇ ದಿನ 448 ಹೊಸ ಕೊರೋನಾ ಸೋಂಕು ಪೀಡಿತ ಪ್ರಕರಣಗಳು ಪತ್ತೆಯಾಗಿವೆ. ಈ ರೀತಿ ಈಗಾಗಲೇ ದೆಹಲಿಯಲ್ಲಿ 3 ದಿನ ಪ್ರತಿನಿತ್ಯ 400ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ದೆಹಲಿಯ ಒಟ್ಟು ಕರೋನಾ ಪೀಡಿತರ ಸಂಖ್ಯೆ 5,980ಕ್ಕೆ ಏರಿಕೆಯಾಗಿದೆ. ಈ ಪೈಕಿ ಇದೇ ವಾರದಲ್ಲಿ 1,431 ಪ್ರಕರಣಗಳು ಪತ್ತೆಯಾಗಿವೆ. ಅಲ್ಲದೆ ಮುಂದಿನ 10 ದಿನವು ಕೂಡ ಪ್ರತಿನಿತ್ಯ 400 ರಿಂದ 500 ಪ್ರಕರಣ ಪತ್ತೆಯಾಗಲಿವೆ. ಇದೇ ರೀತಿ ಕೊರೊನಾ ಸೋಂಕು ಪೀಡಿತರ ಸಂಖ್ಯೆ ಏರುಮುಖವಾಗಿರುವುದರಿಂದ ಜೂನ್ ಮತ್ತು ಜುಲೈ ವೇಳೆಗೆ ಪರಿಸ್ಥಿತಿ ತಾರಕ್ಕೇರಲಿದೆ ಎಂದು ಹೇಳಿದ್ದಾರೆ.

ಪ್ರತಿದಿನ ದೆಹಲಿಯಲ್ಲಿ 400 ರಿಂದ 500 ಮಂದಿ ಕೊರೊನಾ ಪೀಡಿತರಾದರೆ ಅವರೆಲ್ಲರಿಗೂ ಸೂಕ್ತ ಚಿಕಿತ್ಸೆ ಕೊಡಿಸುವುದು, ಕ್ವಾರಂಟೈನ್ ಮಾಡುವುದು, ಐಸೋಲೇಷನ್ ಮಾಡುವುದು ದೆಹಲಿ ಸರ್ಕಾರಕ್ಕೆ ದುಸ್ತರವಾಗಲಿದೆ. ಹಾಲಿ ರೋಗಿಗಳ ಆರೈಕೆ ಮಾಡುವಷ್ಟರಲ್ಲಿ‌ ಹೊಸ ರೋಗಿಗಳು ಬಂದು ಇಡೀ‌ ದೆಹಲಿಯ ಆರೋಗ್ಯ ಸೇವಾ ಸಿಬ್ಬಂದಿ ಹೈರಾಣರಾಗುತ್ತಾರೆ. ಪರಿಸ್ಥಿತಿ ಕೈ ಮೀರುವ ಹಂತ ತಲುಪಲಿದೆ ಎಂದು ಡಾ. ಸರೈನ್ ದೆಹಲಿ ಸರ್ಕಾರವನ್ನು ಎಚ್ಚರಿಸಿದ್ದಾರೆ.

Comments are closed.