
ನಾಗ್ಪುರ್: ಕೊರೊನಾ ವೈರಸ್ ಹರಡುವಿಕೆಗೆ ನಿರ್ದಿಷ್ಟ ಧಾರ್ಮಿಕ ಸಮುದಾಯವನ್ನು ದೂಷಿಸಿವುದು ಸರಿಯಲ್ಲ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಕೊರೊನಾ ವೈರಸ್ ಮತ್ತು ಆ ನಂತರದ ಬೆಳವಣಿಗೆಗಳ ಕುರಿತು ಮಾತನಾಡಿರುವ ಮೋಹನ್ ಭಾಗವತ್ ಕೆಲವರು ಮಾಡಿದ ತಪ್ಪಿಗೆ ಇಡೀ ಸಮಾಜವನ್ನು ದೂಷಿಸುವುದು ಸರಿಯಾದ ಕ್ರಮವಲ್ಲ ಎಂದು ಮಾರ್ಮಿಕವಾಗಿ ಹೇಳಿದರು.
ಭಾರತದ 130 ಕೋಟಿ ಜನ ಪ್ರಧಾನಿ ಮೋದಿ ಕರೆಗೆ ಓಗೊಟ್ಟಿದ್ದು, ಎಲ್ಲರೂ ಒಟ್ಟಾಗಿ ಈ ಮಾರಕ ವೈರಾಣು ವಿರುದ್ಧ ಹೋರಾಡುತ್ತಿದ್ದೇವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಧರ್ಮ ಧರ್ಮಗಳ ನಡುವೆ ಒಡಕನ್ನುಂಟು ಮಾಡುವ ಯಾವುದೇ ಹೇಳಿಕೆ ಅಥವಾ ಪ್ರಯತ್ನವನ್ನು ಆರ್‌ಎಸ್‌ಎಸ್ ತೀವ್ರವಾಗಿ ಖಂಡಿಸುತ್ತದೆ ಮೋಹನ್ ಭಾಗವತ್ ಹೇಳಿದ್ದಾರೆ.
ಇದೇ ವೇಳೆ ಪಾಲ್ಗರ್ ಸಾಧುಗಳ ಹತ್ಯಾ ಪ್ರಕರಣದ ಕುರಿತು ಪ್ರಸ್ತಾಪಿಸಿರುವ ಮೋಹನ್ ಭಾಗವತ್, ನೂರಾರು ಉದ್ರಿಕ್ತ ಗುಂಪು ಸಾಧುಗಳ ಮೇಲೆ ಹಲ್ಲೆ ನಡೆಸುವಾಗ ಪೊಲೀಸರು ಏನು ಮಾಡುತ್ತಿದ್ದರು ಎಂದು ಖಡಕ್ ಆಗಿ ಪ್ರಶ್ನಿಸಿದ್ದಾರೆ.
ಪಾಲ್ಗರ್ ಸಾಧುಗಳ ಮೇಲಿನ ಭೀಕರ ಹಲ್ಲೆಯನ್ನು ಆರ್‌ಎಸ್‌ಎಸ್ ತೀವ್ರವಾಗಿ ಖಂಡಿಸುತ್ತದೆ ಎಂದಿರುವ ಮೋಹನ್ ಭಾಗವತ್, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಭಾರತ ತನ್ನ ಶಕ್ತಿಯನ್ನು ಸೇವೆಗೆ ಮುಡಿಪಿಡುತ್ತದೆ. ಇದು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗ. ಇದೇ ಕಾರಣಕ್ಕೆ ಸಂಕಷ್ಟದ ಸಮಯದಲ್ಲೂ ನಾವು ಸಹಾಯ ಅರಸಿ ಬಂದ ರಾಷ್ಟ್ರಗಳಿಗೆ ಕೈಲಾದ ಸಹಾಯ ಮಾಡಿದ್ದೇವೆ ಎಂದು ಮೋಹನ್ ಭಾಗವತ್ ಹೇಳಿದರು.
Comments are closed.