ರಾಷ್ಟ್ರೀಯ

ಮಧ್ಯ ಪ್ರದೇಶ: 34 ಪೊಲೀಸ್ ಸಿಬ್ಬಂದಿಗೆ ಕೊವಿಡ್-19 ಪಾಸಿಟಿವ್

Pinterest LinkedIn Tumblr


ಭೋಪಾಲ್: ಮಧ್ಯ ಪ್ರದೇಶದ ರಾಜಧಾನಿ ಭೋಪಾಲ್ ದಲ್ಲಿ ಕೆಲವು ಪೊಲೀಸ್ ಅಧಿಕಾರಿಗಳು ಸೇರಿದಂತೆ ಒಟ್ಟು 34 ಪೊಲೀಸ್ ಸಿಬ್ಬಂದಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದ್ದು, ಇದಕ್ಕೆ ತಬ್ಲಿಘಿ ಜಮಾತ್ ಕಾರ್ಯಕ್ರಮವೇ ಕಾರಣ ಎಂದು ಅಧಿಕಾರಿಗಳು ದೂರಿದ್ದಾರೆ.

ಇಂದು ಸೈಬರ್ ಸೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಪೊಲೀಸ್ ಸಿಬ್ಬಂದಿಯೊಬ್ಬರಿಗೆ ಕೊರೋನಾ ವೈರಸ್ ಪಾಸಿಟಿವ್ ಬಂದಿದ್ದು, ಇದುವರೆಗೆ ಅಧಿಕಾರಿಗಳು ಸೇರಿದಂತೆ 34 ಪೊಲೀಸ್ ಸಿಬ್ಬಂದಿಗೆ ಕೊವಿಡ್-19 ಪಾಸಿಟಿವ್ ಬಂದಿದೆ ಎಂದು ಭೋಪಾಲ್ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಉಪೇಂದ್ರ ಜೈನ್ ಅವರು ಪಿಟಿಐಗೆ ತಿಳಿಸಿದ್ದಾರೆ.

ವೈರಸ್ ಹರಡದಂತೆ ತಡೆಯವುದಕ್ಕಾಗಿ ಮತ್ತು ಅವರ ಕುಟುಂಬವನ್ನು ಸುರಕ್ಷಿತವಾಗಿಡಲು ನಗರದ ಸುಮಾರು 2,100 ಪೊಲೀಸ್ ಸಿಬ್ಬಂದಿಗಳು ಕರ್ತವ್ಯ ಮುಗಿದ ನಂತರವೂ ಮನೆಗೆ ತೆರಳುತ್ತಿಲ್ಲ. ಈ ಎಲ್ಲಾ ಸಿಬ್ಬಂದಿ ಹೋಟೆಲ್ ನಲ್ಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಕಳೆದ ತಿಂಗಳು ದೆಹಲಿಯ ನಿಜಾಮುದ್ದೀನ್‌ನಲ್ಲಿ ನಡೆದ ತಬ್ಲಿಘಿ ಜಮಾತ್ ಸಭೆಯಲ್ಲಿ ಭಾಗವಹಿಸಿ ವಾಪಸ್ ರಾಜ್ಯಕ್ಕೆ ಮರಳಿದವರನ್ನು ಹುಡುಕಲು ಪೊಲೀಸ್ ಸಿಬ್ಬಂದಿ ತೆರಳಿದ ವೇಳೆ ಮೊದಲ ಬಾರಿಗೆ ಪೊಲೀಸರಿಗೆ ಸೋಂಕು ತಗುಲಿದೆ ಎಂದು ಅವರು ಹೇಳಿದ್ದಾರೆ.

Comments are closed.