ಕರ್ನಾಟಕ

ಜ್ವರ, ನೆಗಡಿ, ಕೆಮ್ಮು ಸಂಬಂಧ ಔಷಧ ಖರೀದಿಸಿದವರ ವಿವರ ಸಂಗ್ರಹಿಸಲು ಮೆಡಿಕಲ್‌ ಶಾಪ್‌ಗಳಿಗೆ ಸೂಚನೆ

Pinterest LinkedIn Tumblr


ಬೆಂಗಳೂರು: ಕೋವಿಡ್‌-19 ಮುಂಜಾಗ್ರತೆ ಹಿನ್ನೆಲೆಯಲ್ಲಿ ಜ್ವರ, ನೆಗಡಿ, ಕೆಮ್ಮು ಸಂಬಂಧ ಔಷಧ ಖರೀದಿಸಿದವರ ವೈಯಕ್ತಿಕ ವಿವರ ಸಂಗ್ರಹಿಸುವಂತೆ ರಾಜ್ಯದ ಎಲ್ಲ ಔಷಧ ಅಂಗಡಿಗಳಿಗೆ ಸರಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಈ ಸಂಬಂಧ ಅಧಿಸೂಚನೆ ಹೊರಡಿಸಲಾಗಿದೆ. ರಾಜ್ಯದ ಎಲ್ಲ ಔಷಧ ಅಂಗಡಿಯವರು ಹಾಗೂ ಆಸ್ಪತ್ರೆಗಳಲ್ಲಿರುವ ಫಾರ್ಮಸಿಯವರು ಈ ಸೂಚನೆ ಪಾಲಿಸಬೇಕು. ಜ್ವರ, ನೆಗಡಿ, ಕೆಮ್ಮು ಇನ್ನಿತರ ಸಂಬಂಧಿತ ಕಾಯಿಲೆಗೆ ಔಷಧ, ಗುಳಿಗೆ (ಮಾತ್ರೆ) ಖರೀದಿಸಿದವರ ಹೆಸರು, ವಿಳಾಸ, ಮೊಬೈಲ್‌ ನಂಬರ್‌ ದಾಖಲಿಸಿಕೊಳ್ಳಬೇಕು. ಮನೆಯ ಲ್ಯಾಂಡ್‌ಮಾರ್ಕ್‌ ಬಗ್ಗೆಯೂ ನಮೂದು ಮಾಡಿಕೊಳ್ಳಲು ನಿರ್ದೇಶಿಸಲಾಗಿದೆ ಎಂದು ಕೋವಿಡ್‌ ಬುಲೆಟಿನ್‌ ಕುರಿತ ಸುದ್ದಿಗೋಷ್ಠಿಯಲ್ಲಿ ಶಿಕ್ಷಣ ಸಚಿವ ಎಸ್‌.ಸುರೇಶ್‌ಕುಮಾರ್‌ ತಿಳಿಸಿದ್ದಾರೆ.

ಮೆಡಿಕಲ್‌ ಶಾಪ್‌ನವರು ಈ ಕುರಿತ ವಿವರವನ್ನು ನಿತ್ಯವೂ ಜಿಲ್ಲಾ ಆರೋಗ್ಯಾಧಿಕಾರಿಗೆ ಸಲ್ಲಿಸಬೇಕು. ಈ ಮಾಹಿತಿಯನ್ನು ಬಹಿರಂಗ ಪಡಿಸುವಂತಿಲ್ಲ. ಬೇರೆಡೆ ನೀಡುವಂತೆಯೂ ಇಲ್ಲವೆಂಬ ಸೂಚನೆ ನೀಡಲಾಗಿದೆ. ಕೋವಿಡ್‌ ವಿಚಾರದಲ್ಲಿ ಇನ್ನಷ್ಟು ನಿಗಾ ವಹಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಖಾಸಗಿ ಆಸ್ಪತ್ರೆಗಳಲ್ಲೂ ಡಯಾಲಿಸಿಸ್‌

ರಾಜ್ಯದ 166 ಸರಕಾರಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್‌ ಚಿಕಿತ್ಸಾ ಘಟಕವಿದೆ. ಈ ಪೈಕಿ 23 ಆಸ್ಪತ್ರೆಗಳು ಕೋವಿಡ್‌ ಚಿಕಿತ್ಸೆಗೆ ಮೀಸಲಾಗಿವೆ. ಹಾಗಾಗಿ 143 ಸರಕಾರಿ ಆಸ್ಪತ್ರೆಗಳು ಮಾತ್ರ ಡಯಾಲಿಸಿಸ್‌ ಚಿಕಿತ್ಸೆಗೆ ಲಭ್ಯವಿರುತ್ತವೆ. ಇದರ ಹೊರತಾಗಿ 45 ಖಾಸಗಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್‌ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗಿದೆ. ಈ ಖಾಸಗಿ ಆಸ್ಪತ್ರೆಗಳು ಆಯುಷ್ಮಾನ್‌ ಭಾರತ್‌-ಆರೋಗ್ಯ ಕರ್ನಾಟಕ ಯೋಜನೆ ವ್ಯಾಪ್ತಿಯಲ್ಲಿವೆ ಎಂದು ಸಚಿವರು ಮಾಹಿತಿ ನೀಡಿದರು.

ಗರ್ಭಿಣಿಯರು, ಮಕ್ಕಳಿಗೆ ಲಸಿಕೆ ಕಾರ್ಯಕ್ರಮ ಮುಂದುವರಿಕೆ

ಗರ್ಭಿಣಿಯರು ಹಾಗೂ ಮಕ್ಕಳಿಗೆ ಸಾರ್ವತ್ರಿಕ ಲಸಿಕೆ ಹಾಕುವ ಕಾರ್ಯಕ್ರಮ ಮುಂದುವರಿಯಲಿದೆ. ಈ ಸಂಬಂಧವೂ ಸೂಚನೆ ಕೊಡಲಾಗಿದೆ. ಆದರೆ, ನಿಯಂತ್ರಣ ವಲಯದಲ್ಲಿ ಲಸಿಕಾ ಕ್ಯಾಂಪ್‌ ತೆರೆಯುವಂತಿಲ್ಲ. ನಿಯಂತ್ರಣ ವಲಯದಲ್ಲಿ ಉಸ್ತುವಾರಿ ನೋಡಿಕೊಳ್ಳುವ ಆರೋಗ್ಯ ಕಾರ್ಯಕರ್ತರು ಲಸಿಕೆ ಹಾಕುವ ಕೆಲಸದಲ್ಲಿ ತೊಡಗಿಸಿಕೊಳ್ಳಬಾರದು. ನಿಯಂತ್ರಣ ವಲಯದಲ್ಲಿನ ಗರ್ಭಿಣಿಯರು, ಮಗುವಿಗೆ ಜ್ವರ, ಕೆಮ್ಮು, ಶೀತ ಕಾಣಿಸಿಕೊಂಡರೂ ಲಸಿಕೆ ಹಾಕುವುದನ್ನು ಸದ್ಯಕ್ಕೆ ಮುಂದೂಡಬೇಕು. ಹಾಗೆಯೇ ಕೋವಿಡ್‌ ಆಸ್ಪತ್ರೆಗಳಲ್ಲೂ ಲಸಿಕಾ ಶಿಬಿರ ನಡೆಸುವಂತಿಲ್ಲ ಎಂಬ ಮಾರ್ಗಸೂಚಿ ಹೊರಡಿಸಲಾಗಿದೆ ಎಂದು ಸಚಿವ ಸುರೇಶ್‌ ಕುಮಾರ್‌ ತಿಳಿಸಿದರು.

Comments are closed.