ರಾಷ್ಟ್ರೀಯ

ಶಸ್ತ್ರ ಚಿಕಿತ್ಸೆ ಯಶಸ್ವಿ; ದುಷ್ಕರ್ಮಿಗಳು ಕತ್ತರಿಸಿದ್ದ ಪೊಲೀಸ್ ಕೈ ಜೋಡಣೆ

Pinterest LinkedIn Tumblr


ಚಂಡೀಘಡ: ಪಂಜಾಬ್ ನಲ್ಲಿ ದುಷ್ಕರ್ಮಿಗಳು ಕತ್ತರಿಸಿ ಹಾಕಿದ್ದ ಕೈ ಯನ್ನು ವೈದ್ಯರು ಸತತ ಏಳೂವರೆ ಗಂಟೆಗಳ ಯಶಸ್ವೀ ಶಸ್ತ್ರ ಚಿಕಿತ್ಸೆ ನಡೆಸಿ ಮರು ಜೋಡಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ವೈದ್ಯರ ಈ ಸಾಹಸಕ್ಕೆ ಎಲ್ಲಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.

ಹೌದು.. ಲಾಕ್ ಡೌನ್ ಹಿನ್ನಲೆಯಲ್ಲಿ ಬ್ಯಾರಿಕೇಡ್ ಹಾಕಿ ಪರಿಶೀಲಿಸುತ್ತಿದ್ದ ಪೊಲೀಸ್ ಅಧಿಕಾರಿಯ ಕೈ ಕತ್ತರಿಸಿ ಹಾಕಿದ್ದ ದುಷ್ಕರ್ಮಿಯ ಸುದ್ದಿ ನಿನ್ನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಆದರೆ ಈ ಪೊಲೀಸ್ ಪಾಲಿಗೆ ವೈದ್ಯರು ದೇವರಾಗಿದ್ದು, ಕತ್ತರಿಸಿ ಹೋಗಿದ್ದ ಕೈಯನ್ನು ಸತತ ಏಳೂವರೆ ಗಂಟೆಗಳ ಯಶಸ್ವೀ ಶಸ್ತ್ರ ಚಿಕಿತ್ಸೆ ನಡೆಸಿ ಮರು ಜೋಡಣೆ ಮಾಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್, ಈ ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಿದ ವೈದ್ಯರ ತಂಡಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಹಾಗೇ, ಎಎಸ್​ಐ ಹರ್ಜೀತ್ ಸಿಂಗ್ ಶೀಘ್ರವಾಗಿ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

ಚಂಡೀಘಡ್ ನಲ್ಲಿರುವ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ (Post Graduate Institute of Medical Education & Research-PGIMER)ಯಲ್ಲಿ ಪ್ರೊಫೆಸರ್ ಡಾ.ರಮೇಶ್ ಶರ್ಮಾ ಅವರ ನೇತೃತ್ವದ ತಂಡ ಈ ಯಶಸ್ವೀ ಶಸ್ತ್ರ ಚಿಕಿತ್ಸೆ ನಡೆಸಿದ್ದು, ವೈದ್ಯರ ತಂಡಕ್ಕೆ ದೇಶದ ಮೂಲೆ ಮೂಲೆಯಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಈ ಬಗ್ಗೆ ಮಾಹಿತಿ ನೀಡಿರುವ PGIMER ನಿರ್ದೇಶಕ ಡಾ.ಜಗತ್ ರಾಮ್ ಅವರು, ಭಾನುವಾರ ಬೆಳಗ್ಗೆ ಸುಮಾರು 7.45ರಲ್ಲಿ ಪಂಜಾಬ್ ಡಿಜಿ ದಿನಕರ್ ಗುಪ್ತಾ ಅವರು ಕರೆ ಮಾಡಿ ವಿಚಾರ ತಿಳಿಸಿದ್ದರು. ಕೂಡಲೇ ನಾನು ನಮ್ಮ ಪ್ಲಾಸ್ಟಿಕ್ ಸರ್ಜರಿ ವಿಭಾಗ ಮುಖ್ಯಸ್ಥ ಪ್ರೊಫೆಸರ್ ಡಾ.ರಮೇಶ್ ಶರ್ಮಾ ಅವರ ನೇತೃತ್ವದ ತಂಡ ರಚನೆ ಮಾಡಿ ಸಂಪೂರ್ಣ ಜವಾಬ್ದಾರಿ ಅವರಿಗೆ ನೀಡಿದೆ. ಅವರು ಕೇಳಿದ ಎಲ್ಲ ಸೌಲಭ್ಯಗಳನ್ನು ನೀಡಲಾಗಿತ್ತು. ಬಳಿಕ ಸುಮಾರು ಏಳೂವರೆ ಗಂಟೆಗಳ ಶಸ್ತ್ರ ಚಿಕಿತ್ಸೆ ನಡೆಸಿದ ತಂಡ ಯಶಸ್ವಿಯಾಗಿ ಕೈ ಜೋಡಿಸಿದೆ ಎಂದು ಹೇಳಿದ್ದಾರೆ.

ಏನಿದು ಪ್ರಕರಣ?
ಲಾಕ್​ಡೌನ್​ ಹಿನ್ನೆಲೆಯಲ್ಲಿ ಯಾರೂ ಅನವಶ್ಯಕವಾಗಿ ಸಂಚರಿಸುವಂತಿಲ್ಲ ಎಂಬ ನಿಯಮವಿದ್ದರೂ ಪಾಸ್​ ಇಲ್ಲದೆ ರಸ್ತೆಯಲ್ಲಿ ಬೇಕಾಬಿಟ್ಟಿ ಜಾಲಿ ರೈಡ್ ಮಾಡುತ್ತಿದ್ದ ನಿಹಾಂಗ್ ಸಿಖ್ ಯುವಕರ ವಾಹನವನ್ನು ಪಂಜಾಬ್​ ಪೊಲೀಸರು ನಿನ್ನೆ ಬೆಳಗ್ಗೆ ಅಡ್ಡಗಟ್ಟಿದ್ದರು. ಭಾನುವಾರ ಬೆಳಗ್ಗೆ 6:15ಕ್ಕೆ ಪಟಿಯಾಲದ ಮಂಡಿ ಬೋರ್ಡ್​ ಬಳಿ ನಿಹಾಂಗ್ ಸಿಖ್ ಯುವಕರು ಕಾರಿನಲ್ಲಿ ಹೋಗುತ್ತಿದ್ದರು. ಆಗ ಕಾರನ್ನು ಅಡ್ಡಹಾಕಿದ ಪೊಲೀಸರು ಎಲ್ಲಿಗೆ ಹೋಗುತ್ತಿದ್ದೀರಿ? ಎಂದು ಪ್ರಶ್ನೆ ಮಾಡಿದ್ದರು. ಆ ಪ್ರಶ್ನೆಗೆ ಉತ್ತರಿಸಲು ಯುವಕರ ಗುಂಪು ತಡಬಡಾಯಿಸಿದಾಗ ಪಾಸ್ ತೋರಿಸುವಂತೆ ಪೊಲೀಸರು ಕೇಳಿದ್ದರು. ಇದರಿಂದ ಕೋಪಗೊಂಡ ಯುವಕರು ಚೆಕ್​ಪೋಸ್ಟ್​​ಗೆ ಕಾರನ್ನು ನುಗ್ಗಿಸಿದ್ದರು. ಯುವಕರ ತಂಡ ಏಕಾಏಕಿ ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಅನ್ನೇ ಗುದ್ದಿಕೊಂಡು ಮುಂದಕ್ಕೆ ಸಾಗಲು ಯತ್ನಿಸಿತು. ಈ ವೇಳೆ ಕಾರು ಸ್ವಲ್ಪ ಮುಂದೆ ಹೋಗಿ ಬ್ಯಾರಿಕೇಡ್ ಅಡ್ಡ ಇದುದರಿಂದ ಮುಂದಕ್ಕೆ ಸಾಗಲಾಗದೇ ನಿಂತಿತು. ಈ ವೇಳೆ ಕಾರನ್ನು ಅಡ್ಡಗಟ್ಟಿದ ಪೊಲೀಸರು ಕಾರಿನಲ್ಲಿದ್ದ ಯುವಕರನ್ನು ಥಳಿಸಿದ್ದಾರೆ. ಈ ವೇಳೆ ಆಕ್ರೋಶಿತ ಯುವಕರ ತಂಡ ತಮ್ಮನ್ನು ತಡೆಯಲು ಬಂದ ಎಎಸ್​ಐ ಕೈಯನ್ನೇ ಕತ್ತರಿಸಿ ಪರಾರಿಯಾಗಿತ್ತು.

ಈ ಅಚಾನಕ್ ಘಟನೆಯಿಂದ ಗಾಬರಿಯಾದ ಪೊಲೀಸ್ ಸಿಬ್ಬಂದಿ ಎಎಸ್​ಐ ಹರ್ಜೀತ್ ಸಿಂಗ್ ಮತ್ತು ಗಾಯಗೊಂಡ ಪೊಲೀಸರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ನಿನ್ನೆ ಏಳೂವರೆ ಗಂಟೆಗಳ ಕಾಲ ಆಪರೇಷನ್ ಮಾಡಿ ಎಎಸ್​ಐ ಹರ್ಜೀತ್ ಸಿಂಗ್ ಅವರ ಕೈಯನ್ನು ಮರುಜೋಡಿಸಲಾಗಿದೆ.

Comments are closed.