ನವದೆಹಲಿ: ಕೋವಿಡ್ 19 ವೈರಸ್ ಮಹಾಮಾರಿ ವಿಶ್ವದ ಆರ್ಥಿಕತೆಯನ್ನೇ ಬುಡಮೇಲು ಮಾಡಿದೆ. ಅಭಿವೃದ್ಧಿ ಹೊಂದಿದ, ಅಭಿವೃದ್ಧಿಶೀಲ ಮತ್ತು ಬಡ ರಾಷ್ಟ್ರಗಳೆಂಬ ಬೇಧವಿಲ್ಲದೇ ಈ ಮಹಾಮಾರಿ ಎಲ್ಲಾ ಕಡೆ ತಲ್ಲಣವನ್ನು ಸೃಷ್ಟಿಸುತ್ತಿದೆ.
ಈ ವೈರಾಣು ಸಮುದಾಯ ಮಟ್ಟದಲ್ಲಿ ಹರಡದಂತೆ ತಡೆಗಟ್ಟಲು ಸದ್ಯಕ್ಕೆ ಇರುವ ಏಕೈಕ ಪರಿಹಾರವೆಂದರೆ ‘ಲಾಕ್ ಡೌನ್’. ಆದರೆ ಒಂದು ದೇಶದ ದುಡಿಯವ ವರ್ಗ ದುಡಿಮೆ ಇಲ್ಲದೇ ಮನೆಯಲ್ಲಿ ಕುಳಿತುಕೊಂಡರೆ ಅವರಿಗೆ ಮತ್ತು ಆ ಮೂಲಕ ಆ ದೇಶದ ಆರ್ಥಿಕತೆಗೆ ಉಂಟಾಗುವ ನಷ್ಟವನ್ನು ಲೆಕ್ಕಹಾಕುವುದೂ ಅಸಂಭವ.
ಜನಸಂಖ್ಯೆಯಲ್ಲಿ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿರುವ ಭಾರತದ ಆರ್ಥಿಕತೆ ಇತ್ತೀಚಿನ ಕೆಲ ವರ್ಷಗಳಲ್ಲಿ ಇಳಿಮುಖವಾಗಿತ್ತು. ಆದರೆ ಕಳೆದ ಕೆಲವು ತಿಂಗಳುಗಳಿಂದೀಚೆಗೆ ಅದು ಏರುಗತಿಯತ್ತ ಮುಖ ಮಾಡಿತ್ತು. ಅಷ್ಟರಲ್ಲೇ ಅನಿರೀಕ್ಷಿತವಾಗಿ ಅಪ್ಪಳಿಸಿರುವ ಈ ಕೋವಿಡ್ ಮಹಾಮಾರಿ ದೇಶದ ಆರ್ಥಿಕ ಚಟುವಟಿಕೆಗಳನ್ನೇ ಸ್ತಬ್ಧಗೊಳಿಸಿದೆ. ಮತ್ತು ಮಾರ್ಚ್ 25ರಿಂದ ದೇಶಾದ್ಯಂತ ಜಾರಿಯಲ್ಲಿರುವ ಈ ಲಾಕ್ ಡೌನ್ ನಿಂದ ಭಾರತದ ಅರ್ಥವ್ಯವಸ್ಥೆಗೆ ಉಂಟಾಗುವ ನಷ್ಟದ ಅಂದಾಜು ಎಷ್ಟು ಗೊತ್ತೇ?, 98 ಬಿಲಿಯನ್ ಡಾಲರ್ ಗಳು (7.5 ಲಕ್ಷ ಕೋಟಿ).
ದೇಶವ್ಯಾಪಿ ಲಾಕ್ ಡೌನ್ ನಿಂದಾಗಿ ಅತ್ಯಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಕ್ಷೇತ್ರಗಳಲ್ಲಿ ಉತ್ಪಾದನೆ ಬಹುತೇಕ ಸ್ಥಗಿತಗೊಂಡಿದೆ. ಈ ಎಲ್ಲಾ ಕ್ಷೇತ್ರಗಳಲ್ಲಿ ಉಂಟಾಗಿರುವ ಸ್ಥಾಗಿತ್ಯದಿಂದಾಗಿ ಎಪ್ರಿಲ್ 2020ರಿಂದ ಮಾರ್ಚ್ 2021ರ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕ ಬೆಳವಣಿಗೆ ದರ ಒಂದಂಕಿಯನ್ನು ತಲುಪುವ ಸಾಧ್ಯತೆಗಳು ದಟ್ಟವಾಗಿವೆ ಎಂದು ಸೆಂಟ್ರಮ್ ಇನ್ ಸ್ಟಿಟ್ಯೂಷನಲ್ ರಿಸರ್ಚ್ ಅಭಿಪ್ರಾಯಪಟ್ಟಿದೆ.
Comments are closed.