ರಾಷ್ಟ್ರೀಯ

ನಿರ್ಭಯಾ ದೋಷಿ ಅಕ್ಷಯ್ ಸಿಂಗ್‍ಗೆ ವಿಚ್ಛೇದನ ಕೇಳಿದ ಹೆಂಡತಿ

Pinterest LinkedIn Tumblr


ನವದೆಹಲಿ: ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ನಾಲ್ವರು ಅಪರಾಧಿಗಳನ್ನು ಮಾರ್ಚ್ 20ರಂದು ಗಲ್ಲಿಗೇರಿಸಲು ಸಿದ್ಧತೆ ನಡೆದಿದೆ. ಇದೀಗ ಅವರಲ್ಲಿ ಒಬ್ಬನಾದ ಅಕ್ಷಯ್ ಕುಮಾರ್ ಸಿಂಗ್ ಪತ್ನಿ ವಿಚ್ಛೇದನ ಕೇಳುವ ಮೂಲಕ ಪತಿಗೆ ಶಾಕ್ ನೀಡಿದ್ದಾಳೆ.

ಹೌದು. ಅಪರಾಧಿ ಅಕ್ಷಯ್ ಸಿಂಗ್ ಪತ್ನಿ ವಿಚ್ಛೇದನ ಕೇಳಿದ್ದಾಳೆ. ಮಾರ್ಚ್ 13 ರಂದು ಮಹಿಳೆ ಔರಂಗಾಬಾದ್‍ನ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಳು. ಅರ್ಜಿ ಕುರಿತು ಮಂಗಳವಾರ ನ್ಯಾಯಾಲಯ ವಿಚಾರಣೆ ಮಾಡಲಾಗಿದೆ. ಆದರೆ ಅಂದು ವಿಚಾರಣೆಯನ್ನು ಮುಕ್ತಾಯಗೊಳಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಅಕ್ಷಯ್ ಸಿಂಗ್ ಸೇರಿದಂತೆ ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸುವ ಒಂದು ದಿನ ಮೊದಲು ಅಂದರೆ ಮಾರ್ಚ್ 19 ನ್ಯಾಯಲಯಾ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ ಎಂದು ವರದಿಯಾಗಿದೆ.

“ನನ್ನ ಪತಿ ನಿರಪರಾಧಿ, ಆದರೆ ಅತ್ಯಾಚಾರ ಪ್ರಕರಣದಲ್ಲಿ ಆತನನ್ನು ಅಪರಾಧಿ ಎಂದು ಸಾಬೀತಾಗಿದೆ. ಹೀಗಾಗಿ ನ್ಯಾಯಾಲಯದ ಆದೇಶದಂತೆ ಗಲ್ಲಿಗೇರಿಸಲಾಗುವುದು. ಆದರೆ ನಾನು ನಾನೊಬ್ಬ ಅತ್ಯಾಚಾರಿಯ ವಿಧವೆ ಪತ್ನಿ ಎಂದು ಜೀವನ ನಡೆಸಲು ಸಾಧ್ಯವಿಲ್ಲ. ಅದಕ್ಕಾಗಿ ಆತನಿಂದ ವಿಚ್ಛೇದನ ಪಡೆಯಲು ಅರ್ಜಿ ಸಲ್ಲಿಸಿದ್ದೇನೆ” ಎಂದು ಅಕ್ಷಯ್ ಸಿಂಗ್ ಪತ್ನಿ ಹೇಳಿದ್ದಾಳೆ.

ಯಾವುದೇ ಮಹಿಳೆಯ ಪತಿ ಅತ್ಯಾಚಾರದ ಆರೋಪದಲ್ಲಿದ್ದರೆ ಆಕೆ ವಿಚ್ಛೇದನ ಪಡೆಯಬಹುದು. ಕಾನೂನಿನಲ್ಲಿ ಇದಕ್ಕೆ ಅವಕಾಶ ಇದೆ ಎಂದು ಆಕೆಯ ಪರ ವಕೀಲ ಮುಖೇಶ್ ಕುಮಾರ್ ಸಿಂಗ್ ಹೇಳಿದ್ದಾರೆ.

ಮಾರ್ಚ್ 20ರಂದು ಬೆಳಗ್ಗೆ 5.30ಕ್ಕೆ ಗಲ್ಲಿಗೇರಿಸಲು ಈಗಾಗಲೇ ದೆಹಲಿ ನ್ಯಾಯಾಲಯ ಆದೇಶಿಸಿದೆ. ಆದರೆ ಅಕ್ಷಯ್ ಸಿಂಗ್, ಪವನ್ ಗುಪ್ತಾ ಹಾಗೂ ವಿನಯ್ ಶರ್ಮಾ ಮೂವರು ತಮ್ಮ ಗಲ್ಲು ಶಿಕ್ಷೆಯನ್ನು ಪ್ರಶ್ನಿಸಿ ಅಂತರಾಷ್ಟ್ರೀಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಏನಿದು ಪ್ರಕರಣ?
ದೆಹಲಿಯಲ್ಲಿ 2012ರ ಡಿಸೆಂಬರ್ 16ರ ರಾತ್ರಿ ಬಸ್‍ನಲ್ಲಿ ಚಲಿಸುತ್ತಿದ್ದ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ 6 ಜನರು ಅತ್ಯಾಚಾರ ಎಸಗಿದ್ದರು. ತೀವ್ರ ಗಾಯಗೊಂಡಿದ್ದ ನಿರ್ಭಯಾ ಸಿಂಗಾಪುರದಲ್ಲಿ ಡಿಸೆಂಬರ್ 26ರಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. 2013ರ ಸೆಪ್ಟೆಂಬರ್ ಅಂದ್ರೆ ಘಟನೆ ನಡೆದ 9 ತಿಂಗಳ ನಂತರ ನ್ಯಾಯಾಲಯವು 5 ಅಪರಾಧಿಗಳಾದ ರಾಮ್ ಸಿಂಗ್, ಪವನ್, ಅಕ್ಷಯ್, ವಿನಯ್ ಮತ್ತು ಮುಖೇಶ್‍ಗೆ ಮರಣದಂಡನೆ ವಿಧಿಸಿತ್ತು. 2014ರ ಮಾರ್ಚ್ ನಲ್ಲಿ ಹೈಕೋರ್ಟ್ ಮತ್ತು 2017ರ ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಮರಣದಂಡನೆಯನ್ನು ಎತ್ತಿಹಿಡಿದಿದ್ದವು. ವಿಚಾರಣೆಯ ವೇಳೆ ಮುಖ್ಯ ಅಪರಾಧಿ ರಾಮ್ ಸಿಂಗ್ ತಿಹಾರ್ ಜೈಲಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದ. ಓರ್ವ ಅಪ್ರಾಪ್ತ ವಯಸ್ಕನಾಗಿದ್ದರಿಂದ ಆತನಿಗೆ 3 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಜೈಲಿನಿಂದ ಬಿಡುಗಡೆ ಮಾಡಲಾಗಿದೆ.

Comments are closed.