ರಾಷ್ಟ್ರೀಯ

ಕಾಮುಕನ ಕಣ್ಣಿಗೆ ಖಾರದ ಪುಡಿ ಹಾಕಿ ಹತ್ಯೆ

Pinterest LinkedIn Tumblr


ಚೆನ್ನೈ: ಮಹಿಳೆಯೊಬ್ಬಳು ತನ್ನ ಹಿಂದೆ ಬಿದ್ದು ಹಿಂಸೆ ಕೊಡುತ್ತಿದ್ದ ಕಾಮುಕನ ಕಣ್ಣಿಗೆ ಖಾರದ ಪುಡಿ ಹಾಕಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತಮಿಳುನಾಡಿನ ಬೋಡಿನಾಯಕನೂರಿನಲ್ಲಿ ನಡೆದಿದೆ.

ರಾಜನ್ (31) ಮೃತ ವ್ಯಕ್ತಿ. ಕೊಲೆ ಮಾಡಿದ ಬೋಡಿನಾಯಕನೂರಿನ ವಲರ್ಮತಿ (35)ಯನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ರಾಜನ್ ದೇಹದಲ್ಲಿ 20ಕ್ಕೂ ಹೆಚ್ಚು ಚಾಕುವಿನಿಂದ ಇರಿದ ಗಾಯಗಳು ಕಂಡು ಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಏನಿದು ಪ್ರಕರಣ?
ಚಿನ್ನಕ್ಕನಾಲ್ ಬಿ.ಎಲ್.ರಾಮ್ ಮೂಲದ ರಾಜನ್ ಈಗಾಗಲೇ ಎರಡು ಮದುವೆಯಾಗಿದ್ದು, ವಿಚ್ಛೇದನ ಪಡೆದುಕೊಂಡಿದ್ದನು. ಆರೋಪಿ ವಲರ್ಮತಿ ಈ ಹಿಂದೆ ಬಿ.ಎಲ್ ರಾಮ್‍ನಲ್ಲಿದ್ದಳು. ಈಕೆಗೂ ಪತಿ ವಿಚ್ಛೇದನ ನೀಡಿದ ನಂತರ ತನ್ನ ಇಬ್ಬರು ಹೆಣ್ಣುಮಕ್ಕಳೊಂದಿಗೆ ಬೋಡಿನಾಯಕನೂರಿನಲ್ಲಿ ವಾಸಿಸುತ್ತಿದ್ದಳು. ವಾಲರ್ಮತಿ ಏಲಕ್ಕಿ ಎಸ್ಟೇಟ್ ಹೊಂದಿದ್ದು, ಬಿ.ಎಲ್.ರಾಮ್ ಬಳಿ ಮನೆಯಿತ್ತು. ಈಕೆ ರಾಜನ್ ಜೀಪಿನಲ್ಲಿ ತನ್ನ ಎಸ್ಟೇಟಿಗೆ ಹೋಗುತ್ತಿದ್ದಳು. ಈ ವೇಳೆ ಇವರಿಬ್ಬರಿಗೂ ಪರಿಚಯರಾಗಿದ್ದು, ಸಂಬಂಧ ಹೊಂದಿದ್ದರು.

ಸ್ವಲ್ಪ ದಿನಗಳ ನಂತರ ರಾಜನ್ ಜೊತೆಗೆ ಸಂಬಂಧ ತನ್ನ ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗಬಹುದು ಎಂದು ವಲರ್ಮತಿ ಅರಿತುಕೊಂಡು ರಾಜನ್‍ನಿಂದ ದೂರ ಆಗಿದ್ದಳು. ಇದರಿಂದ ಮೃತ ರಾಜನ್ ಕೋಪಗೊಂಡು ಆಕೆಗೆ ಫೋನ್ ಮಾಡಿ ಅಸಭ್ಯವಾಗಿ ಬೈಯುತ್ತಿದ್ದನು. ಅಲ್ಲದೇ ಅನೇಕ ರೀತಿಯಲ್ಲಿ ತೊಂದರೆಗಳನ್ನು ಕೊಡುತ್ತಿದ್ದನು. ಕೊನೆಗೆ ಆತನ ವಿಚಾರ ಸ್ಥಳೀಯರಿಗೆ ಗೊತ್ತಾಗಿ ಅವರು ಮತ್ತೆ ಮಹಿಳೆಗೆ ತೊಂದರೆ ಕೊಡಬಾರದು ಎಂದು ಎಚ್ಚರಿಕೆ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆದರೂ ರಾಜನ್ ವಲರ್ಮತಿಗೆ ತೊಂದರೆ ಕೊಡುತ್ತಿದ್ದನು. ಕೊನೆಗೆ ಮಹಿಳೆ ಬೋಡಿನಾಯಕನೂರಿಗೆ ಹೋಗಿದ್ದಳು. ಅಲ್ಲಿ ಮನೆಯ ಬಳಿಯೇ ಹೋಗಿ ಗಲಾಟೆ ಮಾಡುತ್ತಿದ್ದನು. ಕೊನೆಗೆ ಆತನ ಕಾಟದಿಂದ ಬೇಸತ್ತು ಇಬ್ಬರು ಮಕ್ಕಳನ್ನು ತನ್ನ ಸಂಬಂಧಿಕರ ಮನೆಗೆ ಕಳುಹಿಸಿ, ರಾಜನ್‍ನನ್ನು ಮನೆಗೆ ಬರುವಂತೆ ಹೇಳಿದ್ದಾಳೆ.

ರಾಜನ್ ಮನೆಗೆ ಬಂದ ತಕ್ಷಣ ಆತನ ಕಣ್ಣಿಗೆ ಮೆಣಸಿನ ಪುಡಿಯನ್ನು ಎರಚಿ ಮನಬಂದಂತೆ ಚಾಕುವಿನಿಂದ ಸುಮಾರು 20ಕ್ಕೂ ಹೆಚ್ಚು ಬಾರಿ ಚುಚ್ಚಿದ್ದಾಳೆ. ಪರಿಣಾಮ ರಾಜನ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ನಂತರ ತಾನೇ ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾಳೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆ ರವಾನಿಸಿದ್ದಾರೆ. ಇತ್ತ ವಲರ್ಮತಿಯನ್ನು ಬಂಧಿಸಿದ್ದಾರೆ.

Comments are closed.