ರಾಷ್ಟ್ರೀಯ

ಕೊರೊನಾ ವೈರಸ್: ಈ ದೇಶಗಳ ಜನ ನಮ್ಮ ದೇಶಕ್ಕೆ ಬರುವಂತಿಲ್ಲ!

Pinterest LinkedIn Tumblr


ನವದೆಹಲಿ: ವಿಶ್ವವನ್ನೇ ಕಾಡುತ್ತಿರುವ ಕೊರೊನಾ ವೈರಸ್ ಬಾಧೆ ಇದೀಗ ಭಾರತಕ್ಕೂ ಕಾಲಿಡುವ ಸಾಧ್ಯತೆಗಳು ಗೋಚರಿಸುತ್ತಿರುವಂತೆಯೇ ಕೇಂದ್ರ ಸರಕಾರ ಎಚ್ಚೆತ್ತುಕೊಂಡಿದೆ. ಚೀನಾದ ಬಳಿಕ ಕೊರೊನಾ ವೈರಸ್ ಅಟ್ಟಹಾಸಗೈಯುತ್ತಿರುವ ಇರಾನ್, ಇಟಲಿ, ದಕ್ಷಿಣ ಕೊರಿಯಾ ಮತ್ತು ಜಪಾನ್ ದೇಶಗಳಿಂದ ಬಾರತಕ್ಕೆ ಬರಲು ವೀಸಾ ಪಡೆದುಕೊಂಡಿದ್ದವರ ವೀಸಾಗಳನ್ನು ಇದೀಗ ರದ್ದುಪಡಿಸಲಾಗಿದೆ. ಇದರಲ್ಲಿ ಸಾಮಾನ್ಯ ಮಾದರಿಯ ವೀಸಾ ಮತ್ತು ಇ-ವೀಸಾಗಳೂ ಸೇರಿವೆ.

ಮಂಗಳವಾರಕ್ಕೂ ಮೊದಲು ಈ ನಾಲ್ಕು ದೇಶಗಳಿಂದ ಭಾರತಕ್ಕೆ ಆಗಮಿಸುವವರಿಗೆ ವಿತರಿಸಲಾಗಿದ್ದ ವೀಸಾಗಳನ್ನು ಇದೀಗ ರದ್ದುಪಡಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಅನಿವಾರ್ಯ ಮತ್ತು ತುರ್ತು ಕಾರಣಗಳಿಂದ ಭಾರತಕ್ಕೆ ಪ್ರಯಾಣಿಸಲೇಬೇಕಾದ ಅನಿವಾರ್ಯತೆ ಇರುವ ಈ ನಾಲ್ಕು ದೇಶಗಳಿಗೆ ಸಂಬಂಧಿಸಿದವರು ತಮ್ಮ ಸಮೀಪದಲ್ಲಿರುವ ಭಾರತೀಯ ರಾಯಭಾರಿ ಕಛೇರಿಯನ್ನು ಸಂಪರ್ಕಿಸಿ ಹೊಸ ವೀಸಾಗಳನ್ನು ಪಡೆದುಕೊಳ್ಳಬಹುದು ಎಂಬ ಮಾಹಿತಿಯನ್ನು ಕೇಂದ್ರ ಸರಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಇದೇ ಸಂದರ್ಭದಲ್ಲಿ ಫೆಬ್ರವರಿ 5 ಮತ್ತು ಅದಕ್ಕೂ ಮೊದಲು ಭಾರತ ಭೇಟಿಗೆ ವೀಸಾ ಪಡೆದುಕೊಂಡಿರುವ ಚೀನಾ ದೇಶದ ಪ್ರಜೆಗಳ ಮೇಲಿನ ಭೇಟಿ ನಿರ್ಬಂಧವೂ ಮುಂದುವರೆದಿದೆ. ಸದ್ಯ ಕೊರೊನಾ ವೈರಸ್ ಬಾಧಿತ ದೇಶಗಳಲ್ಲಿದ್ದು ಭಾರತ ಭೇಟಿಯ ಉದ್ದೇಶದಿಂದ ಫೆಬ್ರವರಿ 1 ಮತ್ತು ಅದಕ್ಕೂ ಮೊದಲು ವೀಸಾ ಪಡೆದುಕೊಂಡಿರುವ ಎಲ್ಲಾ ದೇಶದ ನಾಗರಿಕರಿಗೂ ಈ ನಿರ್ಬಂಧ ಅನ್ವಯಿಸುತ್ತದೆ.

Comments are closed.