ರಾಷ್ಟ್ರೀಯ

ನಟ ಚೇತನ್-ಮೇಘ ಜೋಡಿ ಮದುವೆ ರೀತಿಗೆ ಮನಸೋತ ಶಶಿ ತರೂರ್

Pinterest LinkedIn Tumblr


ನವದೆಹಲಿ: ‘ಆ ದಿನಗಳು’ ಖ್ಯಾತಿಯ ನಟ ಚೇತನ್ ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಎಲ್ಲರಿಗು ಗೊತ್ತಿದೆ. ಸರಳ ಹಾಗೂ ವಿಶಿಷ್ಟವಾಗಿ ಮದುವೆಯಾಗಿ ಚೇತನ್-ಮೇಘ ಜೋಡಿ ಎಲ್ಲರ ಗಮನ ಸೆಳೆದಿದ್ದರು. ಈಗ ಈ ಜೋಡಿಯ ವಿಶಿಷ್ಟ ಮದುವೆ ಬಗ್ಗೆ ತಿಳಿದ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಟ್ವೀಟ್ ಮಾಡಿ ನವ ಜೋಡಿಗೆ ಶುಭಕೋರಿ ಭೇಷ್ ಎಂದಿದ್ದಾರೆ.

ಫೆಬ್ರವರಿ 1ರಂದು ಸರಳವಾಗಿ ರಿಜಿಸ್ಟರ್ ಮದುವೆ ಮಾಡಿಕೊಂಡು ಗೆಳತಿ ಮೇಘರನ್ನ ಚೇತನ್ ವರಿಸಿದ್ದಾರೆ. ಫೆಬ್ರವರಿ 2ರಂದು ಕುಟುಂಬಸ್ಥರು ಮತ್ತು ಚಲನಚಿತ್ರ, ರಾಜಕೀಯ ಗಣ್ಯರಿಗಾಗಿ ವಿಶಿಷ್ಟವಾಗಿ ಆರತಕ್ಷತೆ ಮತ್ತು ಸಂತೋಷ ಕೂಟ ಆಯೋಜಿಸಿ ಚೇತನ್-ಮೇಘ ದಂಪತಿ ಎಲ್ಲರ ಗಮನ ಸೆಳೆದಿದ್ದರು. ಮದುವೆ ಹೇಗೆ ಸರಳವಾಗಿ ನಡೆಯಿತೋ ಅದೇ ರೀತಿ ಚೇತನ್ ಮತ್ತು ಮೇಘರ ಆರತಕ್ಷತೆ ಕೂಡ ನಡೆದಿತ್ತು. ಬೆಂಗಳೂರಿನ ವಲ್ಲಭ್ ನಿಕೇತನ ವಿನೋಬಾ ಭಾವೆ ಆಶ್ರಮದಲ್ಲಿ ಆರತಕ್ಷತೆ ನಡೆದಿತ್ತು. ಸರಳ ಮತ್ತು ಸುಂದರವಾಗಿ ನೆರವೇರಿದ ಆರತಕ್ಷತೆ ಮತ್ತು ಸಂತೋಷ ಕೂಟದಲ್ಲಿ ವಚನ ಗಾಯನ, ಸೂಫಿ ಗಾಯನ, ಕೊರಗ ನೃತ್ಯ, ಲಂಬಾಣಿ ನೃತ್ಯ, ಸಿದ್ಧಿ ನೃತ್ಯ ಏರ್ಪಡಿಸಲಾಗಿತ್ತು.

ನವ ದಂಪತಿ ಚೇತನ್ ಮತ್ತು ಮೇಘ ಜೋಡಿಗೆ ಶುಭ ಕೋರಿದ ಶಶಿ ತರೂರ್, ”ಇದೊಂದು ಸಾಮಾಜಿಕ ಪ್ರಜ್ಞೆಯ ಮದುವೆ. ವಿವಾಹಕ್ಕೆ ಬಂದವರಿಗೆ ಭಾರತೀಯ ಸಂವಿಧಾನದ ಪುಸ್ತಕಗಳನ್ನು ಉಡುಗೊರೆಯಾಗಿ ಚೇತನ್ ಮತ್ತು ಮೇಘ ಕೊಟ್ಟಿದ್ದಾರೆ. ಅಲ್ಲದೆ ಅದನ್ನು ತೃತೀಯ ಲಿಂಗಿಗಳ ಹಕ್ಕುಗಳ ಹೋರಾಟಗಾರ್ತಿ ಅಕ್ಕೈ ಅವರಿಂದ ಓದಿಸಿ ಜೋಡಿ ಕೆಲವು ಪ್ರತಿಜ್ಞೆ ಮಾಡಿದ್ದಾರೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ. ನವ ಜೋಡಿಯ ಸಮಾಜಿಕ ಕಳಕಳಿ ಶಶಿ ತರೂರ್ ಅವರ ಮನ ಗೆದ್ದಿದೆ.

ಚೇತನ್ ಮತ್ತು ಮೇಘ ಆರತಕ್ಷತೆ ಮತ್ತು ಸಂತೋಷ ಕೂಟದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಪತ್ನಿ ಅಶ್ವಿನಿ ಪಾಲ್ಗೊಂಡು ನವ ಜೋಡಿಗೆ ಶುಭ ಹಾರೈಸಿದ್ದರು. ಈ ವೇಳೆ ಪುನೀತ್ ಚೇತನ್ ಅವರು ಕನ್ನಡದ ಮೇಲಿಟ್ಟಿರುವ ಪ್ರೀತಿ ಅಭಿಮಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ನಟ ಮಯೂರ್ ಪಟೇಲ್, ನಿರ್ದೇಶಕ ಪಿ.ಸಿ.ಶೇಖರ್, ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಸೇರಿದಂತೆ ಕನ್ನಡ ಚಿತ್ರರಂಗದ ಹಲವು ಗಣ್ಯರು ಚೇತನ್-ಮೇಘ ಆರತಕ್ಷತೆಯಲ್ಲಿ ಪಾಲ್ಗೊಂಡು ನವ ದಂಪತಿಗೆ ಆಶೀರ್ವದಿಸಿದ್ದರು. ಕೇವಲ ಸಿನಿಮಾ ಕಲಾವಿದರು ಮಾತ್ರವಲ್ಲ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಪತ್ನಿ ಸಮೇತ ಚೇತನ್-ಮೇಘ ಆರತಕ್ಷತೆಗೆ ಬಂದು ನವ ಜೋಡಿಗೆ ಶುಭ ಹಾರೈಸಿದ್ದರು. ಹಾಗೆಯೇ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕೂಡ ಆರತಕ್ಷತೆಗೆ ಬಂದು ಶುಭ ಕೋರಿದ್ದರು.

Comments are closed.