ರಾಷ್ಟ್ರೀಯ

ಭಾರತದಲ್ಲೂ ಭೀತಿ ಹುಟ್ಟಿಸಿದ ಕೊರೋನಾ ವೈರಸ್; ಸಚಿವರ ಸಮಿತಿಯೊಂದನ್ನು ರಚನೆ ಮಾಡಿದ ಕೇಂದ್ರ ಸರ್ಕಾರ

Pinterest LinkedIn Tumblr

ನವದೆಹಲಿ: ಚೀನಾದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಕೊರೋನಾ ವೈರಸ್ ಇದೀಗ ಭಾರತದಲ್ಲೂ ಭೀತಿ ಹುಟ್ಟಿಸಿದ್ದು, ಕೇರಳ ರಾಜ್ಯದಲ್ಲಿ 3 ಪ್ರಕರಣಗಳು ಪತ್ತೆಯಾಗಿವೆ. ಇದರ ಬೆನ್ನಲ್ಲೇ, ಕೇಂದ್ರ ಸರ್ಕಾರ ಸಚಿವರ ಸಮಿತಿಯೊಂದನ್ನು ರಚನೆ ಮಾಡಿದ್ದು, ಸಮಿತಿಯು ತನ್ನ ಮೊದಲ ಸಭೆ ನಡೆಸಿ ಪರಿಸ್ಥಿತಿಯನ್ನು ಪರಾಮರ್ಶೆ ನಡೆಸಿದೆ.

ಸಮಿತಿಯಲ್ಲಿ ಕೇಂದ್ರ ಸಚಿವರಾದ ಡಾ.ಹರ್ಷವರ್ಧನ್, ಹರ್ದೀಪ್ ಪುರಿ, ಎಸ್.ಜೈಶಂಕರ್, ಜಿ.ಕೃಷ್ಣರೆಡ್ಡಿ, ಅಶ್ವಿನಿ ಕಮಾರ್ ಚೌಬೈ ಹಾಗೂ ಮನ್ಸುಖ್ ಲಾಲ್ ಮಾಂಡವಿಯಾ ಇದ್ದಾರೆ.

ಸಮಿತಿಯು ಪರಿಸ್ಥಿತಿಯ ಅಧ್ಯಯನದ ಜೊತೆಗೆ, ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮೇಲ್ವಿಚಾರಮೆ ನಡೆಸಲಿದೆ ಎಂದು ತಿಳಿದುಬಂದಿದೆ.

ಈ ನಡುವೆ ಭಯಾನಕ ಕೊರೋನಾದಿಂದ ತತ್ತರಿಸಿರುವ ಚೀನಾ ರಾಷ್ಟ್ರಕ್ಕೆ ಭೇಟಿ ನೀಡದಂತೆ ಭಾರತೀಯರಿಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತೆ ಸಲಹೆ ನೀಡಿದೆ.

ಅಲ್ಲದೆ, 2020ರ ಜ.15ರ ಬಳಿಕ ಯಾರು ಯಾರು ಚೀನಾ ರಾಷ್ಟ್ರಕ್ಕೆ ತೆರಳಿ ಅಲ್ಲಿಂದ ಮರಳಿದ್ದಾರೋ ಅವರೆಲ್ಲನ್ನೂ 14 ದಿನಗಳ ಕಾಲ ಪ್ರತ್ಯೇಕ ಕೊಠಡಿಯಲ್ಲಿಟ್ಟು ನಿಗಾವಹಿಸುವುದಾಗಿ ಘೋಷಣೆ ಮಾಡಿದೆ.

ತೀವ್ರ ಉಸಿರಾಟದ ತೊಂದರೆ(Severe Acute Respiratory Syndrome)ಯನ್ನು ಉಂಟುಮಾಡುವ ಕಾಯಿಲೆಯೇ ಈ ಕೊರೊನಾ ವೈರಸ್. ಇದು ಮುಂದುವರಿಯುತ್ತಾ ಹೋದರೆ ನ್ಯೂಮೋನಿಯಾ ಮತ್ತು ಇತರ ಉಸಿರಾಟ ಸಂಬಂಧಿ ತೊಂದರೆ ಕಾಣಿಸುತ್ತದೆ. ಇದು ಮೊದಲು ಕಾಣಿಸಿಕೊಂಡಿದ್ದು ಚೀನಾ ಕೇಂದ್ರ ಭಾಗದ ವುಹನ್ ಎಂಬಲ್ಲಿಯಾದ್ದರಿಂದ ಇದನ್ನು ವುಹನ್ ವೈರಸ್ ಎಂತಲೂ ಕರೆಯುತ್ತಾರೆ.

ನಾಯಿ ಮತ್ತು ಬೆಕ್ಕುಗಳಲ್ಲಿ ಈ ಕೊರೊನಾ ವೈರಸ್ ಸಾಮಾನ್ಯ, ಇತರ ಪ್ರಾಣಿಗಳಲ್ಲಿ ಕೂಡ ಕಾಣಿಸುವುದು ಉಂಟು. ಹುವಾನಾನ್ ಸಮುದ್ರಾಹಾರ ಮಾರುಕಟ್ಟೆಯಲ್ಲಿ ಈ ವೈರಸ್ ಮೊದಲು ಕಾಣಿಸಿಕೊಂಡಿದೆಯಂತೆ. ಇಲ್ಲಿ ಸಮುದ್ರ ಪ್ರಾಣಿಗಳನ್ನು ಜೀವಂತವಾಗಿ ಮಾರಾಟ ಮಾಡಲಾಗುತ್ತದೆ. ಆದರೂ ಆರೋಗ್ಯಾಧಿಕಾರಿಗಳು ಕೊರೊನಾ ವೈರಸ್ ಸೋಂಕು ಹರಡಲು ನಿಖರ ಕಾರಣವೇನೆಂದು ಇನ್ನೂ ದೃಢಪಡಿಸಿಲ್ಲ. ಹೊಸ ವರ್ಷದಿಂದ ಈ ಮಾರುಕಟ್ಟೆ ಮುಚ್ಚಲ್ಪಟ್ಟಿದೆ.

ಮನುಷ್ಯನಿಂದ ಮನುಷ್ಯನಿಗೆ ಹರಡುವ ಸೋಂಕು ಇದು ಎಂದು ವೈದ್ಯಕೀಯ ತಜ್ಞರು ಹೇಳುತ್ತಾರೆ. ಕೆಮ್ಮು, ಸೀನು ಅಥವಾ ಒಬ್ಬರಿಗೊಬ್ಬರು ಕೈ ಕುಲುಕುವಿಕೆಯಿಂದ ಕೂಡ ವೈರಸ್ ಹರಡಬಹುದು.

Comments are closed.